ತೆಲುಗಿನ ಖ್ಯಾತ ನಟ, ನಟಸಿಂಹ ನಂದಮೂರಿ ಬಾಲಕೃಷ್ಣ ಅವರು ಅಪಘಾತಕ್ಕೊಳಗಾಗಿದ್ದಾರೆ. ಕಾಕಿನಾಡ ಬಂದರು ಪ್ರದೇಶದಲ್ಲಿ ನಡೆಯುತ್ತಿದ್ದ ಅವರ ಹೊಸ ಸಿನಿಮಾ ‘NBK111’ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ನಿರ್ದೇಶಕ ಗೋಪಿಚಂದ್ ಮಲಿನೇನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಭಾರಿ ಆಕ್ಷನ್ ಎಂಟರ್‌ಟೈನರ್ ಚಿತ್ರದ ಪ್ರಮುಖ ದೃಶ್ಯಗಳನ್ನು ಕಾಕಿನಾಡ ಬಂದರು ಸುತ್ತಮುತ್ತ ಚಿತ್ರೀಕರಿಸಲಾಗುತ್ತಿತ್ತು. ಇದೇ ವೇಳೆ ಬಾಲಕೃಷ್ಣ ಅವರು ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದು, ಈ ಪರಿಣಾಮ ಅವರ ಮೊಣಕಾಲಿಗೆ ಸಣ್ಣ ಗಾಯವಾಗಿದೆ. ಘಟನೆಯನ್ನು ಗಮನಿಸಿದ ಚಿತ್ರತಂಡ ತಕ್ಷಣವೇ ಚಿತ್ರೀಕರಣವನ್ನು ಸ್ಥಗಿತಗೊಳಿಸಿ, ಬಾಲಕೃಷ್ಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿತು.
ಆತಂಕ ಬೇಡ ಎಂದ ವೈದ್ಯರು
ಆಸ್ಪತ್ರೆಯಲ್ಲಿ ವೈದ್ಯರು ಬಾಲಕೃಷ್ಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದಾರೆ. ಗಾಯವು ಸಣ್ಣ ಪ್ರಮಾಣದಲ್ಲಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಲಾಗಿದೆ ಎಂದು ತಿಳಿದುಬಂದಿದೆ.
‘ವೀರಸಿಂಹಾರೆಡ್ಡಿ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಬಾಲಕೃಷ್ಣ ಹಾಗೂ ಗೋಪಿಚಂದ್ ಮಲಿನೇನಿ ಜೋಡಿ ಮತ್ತೆ ಒಂದಾಗಿರುವ ಎರಡನೇ ಚಿತ್ರ ಇದಾಗಿದೆ. ಕಾಕಿನಾಡದಲ್ಲಿ ಭಾರಿ ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ. ಬಾಲಕೃಷ್ಣ ಅವರಿಗೆ ಗಾಯವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಅಭಿಮಾನಿಗಳು ಹಾಗೂ ಸಿನಿರಂಗದ ಗಣ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಶೀಘ್ರ ಗುಣಮುಖರಾಗಿ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

