ಕೊಪ್ಪಳ: ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆಯ ವಿರುದ್ಧ ರೈತರು, ಪರಿಸರ ಹೋರಾಟಗಾರರು ಮತ್ತು ವಿವಿಧ ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಗಳು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಧರಣಿ ನಡೆಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.
ಬಲ್ಡೋಟಾ ಕಾರ್ಖಾನೆ ಎದುರು ಪ್ರತಿಭಟನಾ ಸಮಾವೇಶ ನಡೆಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿ 63ರಲ್ಲಿಯೇ ರೈತರು ಕುರ್ಚಿಗಳನ್ನು ಹಾಕಿ ಧರಣಿ ನಡೆಸಿದ್ದಾರೆ. ಪರಿಣಾಮ, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.
ಹೆದ್ದಾರಿಯಲ್ಲಿ ಚೇರ್ಗಳನ್ನು ಹಾಕದಂತೆ ಪ್ರತಿಭಟನಾಕಾರರಿಗೆ ಪೊಲೀಸರು ಮನವಿ ಮಾಡಿದರೂ ಹೋರಾಟಗಾರರು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಪ್ರತಿಭಟನಾಕಾರರು ಹಾಅಗೂ ಪೊಲೀಸರ ನಡುವೆ ಮಾತಿನಚಕಮಕಿ ನಡೆದಿದೆ. ಹೋರಾಟಗಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.
ಕೊಪ್ಪಳ ಜಿಲ್ಲೆಯ ಬಸಾಪೂರ ಬಳಿ ನಡೆಯುತ್ತಿರುವ ಸುಮಾರು 54,000 ಕೋಟಿ ವೆಚ್ಚದ ಬಲ್ಡೋಟಾ ಉಕ್ಕಿನ ಕಾರ್ಖಾನೆಯ ವಿಸ್ತರಣೆಯನ್ನು ವಿರೋಧಿಸಿ ಸ್ಥಳೀಯ ರೈತರು, ಜನಸಾಮಾನ್ಯರು ಮತ್ತು ಪರಿಸರ ಹಿತರಕ್ಷಣಾ ಸಮಿತಿಯು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಈ ವಿಸ್ತರಣೆಯಿಂದ ತೀವ್ರ ವಾಯು ಹಾಗೂ ಜಲ ಮಾಲಿನ್ಯ ಉಂಟಾಗಿ ಕೃಷಿ ಮತ್ತು ಜನರ ಆರೋಗ್ಯಕ್ಕೆ ಅಪಾಯವಾಗಲಿದೆ ಎಂಬುದು ಮುಖ್ಯ ಆರೋಪವಾಗಿದೆ.
ಕಾರ್ಖಾನೆಯಿಂದ ಹತ್ತಿರದ ಗ್ರಾಮಗಳು ಮತ್ತು ಕೊಪ್ಪಳ ನಗರದ ಸುತ್ತಮುತ್ತಲಿನ ಪರಿಸರ ಹಾಳಾಗುವ ಆತಂಕ ಎದುರಾಗಿದೆ. ಅಕ್ಕಪಕ್ಕದ ರೈತರ ಜಮೀನುಗಳು, ಬೆಳೆಗಳು ಮತ್ತು ಜಾನುವಾರುಗಳಿಗೆ ತೊಂದರೆಯಾಗುತ್ತವೆ. ಕಾರ್ಖಾನೆಯ ವಿಸ್ತರಣೆಯಿಂದ ಉಂಟಾಗುವ ವಿಷಕಾರಿ ಹೊಗೆ ಹಾಗೂ ತ್ಯಾಜ್ಯದಿಂದ ಜನರ ಆರೋಗ್ಯ ಹದಗೆಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

