ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಗಿಟ್ಟಿಸಿಕೊಳ್ಳಲು ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟವಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ, ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡುರಸ್ತೆಯಲ್ಲೇ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ, ಹೊಸ ಕಾರಿನ ರೀಲ್ಸ್ (Reels) ಚಿತ್ರೀಕರಿಸಿ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಸಿದ್ದ ಗುಂಪಿನ ವಿರುದ್ಧ ಪುಣೆಯ ಬಾವ್ಧಾನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏನಿದು ಘಟನೆ? ಮಾವಲ್ ತಾಲೂಕಿನ ಕುಸ್‌ಗಾಂವ್ ನಿವಾಸಿ ಸೋಮನಾಥ್ ಅಶೋಕ್ ಕೇದಾರಿ (32) ಎಂಬಾತ ಇತ್ತೀಚೆಗೆ ಮಹೀಂದ್ರಾ BE 6 (MH 14 NP 5644) ಹೊಸ ಕಾರನ್ನು ಖರೀದಿಸಿದ್ದನು. ಆ ವಾಹನವನ್ನು ಬ್ಯಾನರ್‌ನಲ್ಲಿರುವ ಶೋರೂಂನಿಂದ ಡೆಲಿವರಿ ಪಡೆದುಕೊಂಡು ತೆರಳುವಾಗ, ಆತನ ಜೊತೆಗಿದ್ದ ಸಂಬಂಧಿಕರು ಹಾಗೂ ಸ್ನೇಹಿತರು ಬ್ಯಾನರ್‌ನಿಂದ ವಾಕಡ್‌ನ ಭುಜಬಲ್ ಚೌಕ್ ನಡುವೆ ಹೆದ್ದಾರಿಯುದ್ದಕ್ಕೂ ಹೈಡ್ರಾಮಾ ಸೃಷ್ಟಿಸಿದ್ದಾರೆ.
ಎರಡು ಟೊಯೋಟಾ ಫಾರ್ಚೂನರ್ (MH 14 KH 5644 ಮತ್ತು MH 14 LU 1080) ಕಾರುಗಳು ಸೇರಿದಂತೆ ಹಲವು ವಾಹನಗಳನ್ನು ರಸ್ತೆಯುದ್ದಕ್ಕೂ ಸಮಾಂತರವಾಗಿ, ಅಕ್ಕಪಕ್ಕದಲ್ಲೇ ತೀರಾ ಹತ್ತಿರವಾಗಿ ಓಡಿಸುತ್ತಾ, ದಿಢೀರ್ ಬ್ರೇಕ್ ಹಾಕಿ ನಡುರಸ್ತೆಯಲ್ಲೇ ನಿಲ್ಲಿಸಿ ರೀಲ್ಸ್ ಚಿತ್ರೀಕರಣ ನಡೆಸಿದ್ದಾರೆ.
ನಿಷೇಧವಿದ್ದರೂ ಹಾರಿಸಿದ್ರು ಡ್ರೋನ್ ! ರೀಲ್ಸ್ ಶೂಟಿಂಗ್‌ಗಾಗಿ ‘ಎಸ್‌ಸಿ ಫೋಟೋಗ್ರಫಿ’ಯ ಸೋಹಂ ಚವಾಣ್ ಎಂಬಾತನನ್ನು ಬಳಸಿಕೊಳ್ಳಲಾಗಿದ್ದು, ಆತ ಹೆದ್ದಾರಿಯಲ್ಲಿ ಡ್ರೋನ್ ಕ್ಯಾಮೆರಾ ಬಳಸಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟಕ್ಕೆ ನಿಷೇಧಾಜ್ಞೆ (BNSS ಸೆಕ್ಷನ್ 163) ಜಾರಿಯಲ್ಲಿದ್ದರೂ ಕಾನೂನು ಉಲ್ಲಂಘಿಸಿ ಡ್ರೋನ್ ಹಾರಿಸಲಾಗಿದೆ.
ಪೊಲೀಸರ ಖಡಕ್ ಕ್ರಮ: ಸಾಮಾಜಿಕ ಜಾಲತಾಣಗಳಲ್ಲಿ ಈ ಅಪಾಯಕಾರಿ ಚಾಲನೆಯ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
-
ದಾಖಲಾದ ಸೆಕ್ಷನ್‌ಗಳು: ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 285, 281, 223, 3(5) ಹಾಗೂ ಮೋಟಾರು ವಾಹನ ಕಾಯ್ದೆಯ (MVA) ಸೆಕ್ಷನ್ 184, 122 ಅಡಿಯಲ್ಲಿ ಕ್ರೈಂ ನಂ. 385/2026 ರಂತೆ ಪ್ರಕರಣ ದಾಖಲಾಗಿದೆ.
-
ವಶಕ್ಕೆ ಪಡೆದ ವಾಹನಗಳು: ಕೃತ್ಯಕ್ಕೆ ಬಳಸಲಾದ ಎರಡು ಫಾರ್ಚೂನರ್ ಕಾರುಗಳನ್ನು ಮತ್ತು ಅವುಗಳ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಆಯುಕ್ತ ವಿನೋಯ್ ಕುಮಾರ್ ಚೌಬೆ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಾವ್ಧಾನ್ ಠಾಣೆಯ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಅರವಿಂದ್ ಪವಾರ್ ನೇತೃತ್ವದ ತಂಡ ಮುಂದಿನ ತನಿಖೆ ಕೈಗೊಂಡಿದೆ. ಸಾರ್ವಜನಿಕ ರಸ್ತೆಗಳಲ್ಲಿ ಸಾರ್ವಜನಿಕರ ಜೀವಕ್ಕೆ ಸಂಚಕಾರ ತರುವಂತೆ ರೀಲ್ಸ್ ಹುಚ್ಚಾಟ ಮೆರೆದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

