CJP ಪ್ರತಿಭಟನಾಕಾರರಿಗೆ ಭಾರಿ ರಿಲೀಫ್ ಸಿಕ್ಕಿದೆ. ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾಗಿದ್ದ ಎಲ್ಲಾ ಎಫ್‌ಐಆರ್‌ಗಳನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ನೆಮ್ಮದಿ ದೊರೆತಿದೆ.
ಆದರೆ, ಈ ಹಿಂದೆ ಅಪರಾಧ ಹಿನ್ನೆಲೆ ಹೊಂದಿರುವವರಿಗೆ ಮಾತ್ರ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಅಂತಹವರ ವಿರುದ್ಧದ ಪ್ರಕರಣಗಳು ಮುಂದುವರಿಯಲಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಂದ ಯುವಕರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಸಂವಿಧಾನದ ಆರ್ಟಿಕಲ್ 142ರ ಅಡಿಯಲ್ಲಿ ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಜುಲೈ 20ರಿಂದ 25ರವರೆಗೆ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಇದೇ ಅವಧಿಯಲ್ಲಿ ನಡೆದ CJP ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದೇಶದ ಯಾವುದೇ ಭಾಗದಲ್ಲೂ ಹೊಸ ಎಫ್‌ಐಆರ್ ದಾಖಲಿಸಬಾರದು ಎಂದು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
ಆದರೆ, 2,873 ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ವಿಚಾರದಲ್ಲಿ ಪೊಲೀಸರಿಗೆ ಸ್ವಾತಂತ್ರ್ಯ ನೀಡಲಾಗಿದೆ. ಅಂದರೆ, ಅವರ ವಿರುದ್ಧ ಕಾನೂನು ಕ್ರಮ ಮುಂದುವರಿಸಲು ಅವಕಾಶ ನೀಡಲಾಗಿದೆ.
ಇದೇ ವೇಳೆ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಅಗತ್ಯವಾದ ಮಾರ್ಗಸೂಚಿಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಮಾರ್ಗಸೂಚಿಗಳನ್ನು ರೂಪಿಸಿದ ಮೂರು ತಿಂಗಳೊಳಗೆ ಕೇಂದ್ರ ಸರ್ಕಾರ ಪರಿಹಾರವನ್ನು ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಒಪ್ಪಂದದ ಷರತ್ತುಗಳಿಗೆ ಬದ್ಧವಾಗಿರಬೇಕು ಎಂಬ ಷರತ್ತಿನೊಂದಿಗೆ, ಆರ್ಟಿಕಲ್ 142ರ ಅಡಿಯಲ್ಲಿ ಎಫ್‌ಐಆರ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸೆಪ್ಟೆಂಬರ್ 5ರ ಪ್ರತಿಭಟನೆ ರದ್ದು
ಪ್ರಕರಣಗಳನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 5ರಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ರದ್ದುಗೊಳಿಸುವುದಾಗಿ CJP ಘೋಷಿಸಿದೆ. ಸೆಪ್ಟೆಂಬರ್ 5ರಂದು ನೀಡಲಾಗಿದ್ದ ಪ್ರತಿಭಟನೆಯ ಕರೆಯನ್ನು ಹಿಂಪಡೆಯುತ್ತಿರುವುದಾಗಿ CJP ಪ್ರತಿನಿಧಿಗಳು ತಿಳಿಸಿದ್ದಾರೆ.

