ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ‘A’ ಮತ್ತು ‘B’ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿದೆ. ಒಟ್ಟು 319 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಗಡುವನ್ನು ಸೆಪ್ಟೆಂಬರ್ 7, 2026ರವರೆಗೆ ವಿಸ್ತರಿಸಲಾಗಿದೆ.
ಕೆಪಿಎಸ್‌ಸಿ ಜುಲೈ 31ರಂದು ನೇಮಕಾತಿ ಅಧಿಸೂಚನೆ ಹೊರಡಿಸಿತ್ತು. ನಿಗದಿತ ವೇಳಾಪಟ್ಟಿಯಂತೆ ಆಗಸ್ಟ್ 1ರಿಂದ ಆಗಸ್ಟ್ 31ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಅಭ್ಯರ್ಥಿಗಳ ಅನುಕೂಲಕ್ಕಾಗಿ ಅರ್ಜಿ ಸಲ್ಲಿಕೆ ಗಡುವನ್ನು ಮತ್ತಷ್ಟು ವಿಸ್ತರಿಸಲಾಗಿದೆ.
319 ಹುದ್ದೆಗಳ ನೇಮಕಾತಿ
ಈ ನೇಮಕಾತಿಯಲ್ಲಿ ಉಳಿಕೆ ಮೂಲ ವೃಂದ (RPC)ದ 297 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ (KK) ವೃಂದದ 22 ಹುದ್ದೆಗಳು ಸೇರಿದಂತೆ ಒಟ್ಟು 319 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿವೆ.
ಗಡುವು ವಿಸ್ತರಣೆಗೆ ಕಾರಣವೇನು?
ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಗೆ ಹಲವು ಕಾರಣಗಳಿವೆ. ಸೇವಾ ಸಿಂಧು ಹಾಗೂ ನಾಡಕಚೇರಿ ಪೋರ್ಟಲ್‌ಗಳಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಜಾತಿ, ಆದಾಯ ಮತ್ತು ಒಳ ಮೀಸಲಾತಿ ಪ್ರಮಾಣಪತ್ರಗಳನ್ನು ಪಡೆಯಲು ಅಭ್ಯರ್ಥಿಗಳಿಗೆ ತೊಂದರೆಯಾಗಿತ್ತು.
ಅದೇ ರೀತಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಆನ್‌ಲೈನ್ ಶುಲ್ಕ ಪಾವತಿಸುವಲ್ಲಿಯೂ ಅಭ್ಯರ್ಥಿಗಳು ಸಮಸ್ಯೆ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಕೆ ಗಡುವು ವಿಸ್ತರಿಸುವಂತೆ ಕೆಪಿಎಸ್‌ಸಿಗೆ ಮನವಿ ಮಾಡಿದ್ದರು.
ಅಭ್ಯರ್ಥಿಗಳ ಶೈಕ್ಷಣಿಕ ಹಿತಾಸಕ್ತಿ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸೆಪ್ಟೆಂಬರ್ 7ರವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಲಾಗಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಕೆ. ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಸೂಕ್ತ.

