‘ಬಾಹುಬಲಿ’ ಚಿತ್ರದ ಭಲ್ಲಾಳದೇವ ಪಾತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಟ ರಾಣಾ ದಗ್ಗುಬಾಟಿ, ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಇತ್ತೀಚೆಗೆ ರಿಯಾ ಚಕ್ರವರ್ತಿ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಅವರು, ಕಿಡ್ನಿ ವೈಫಲ್ಯ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ತಾವು ಅನುಭವಿಸಿದ ಮಾನಸಿಕ ಮತ್ತು ದೈಹಿಕ ಬದಲಾವಣೆಗಳನ್ನು ಹಂಚಿಕೊಂಡಿದ್ದಾರೆ.
‘ಬಾಹುಬಲಿ 2’ ಯಶಸ್ಸಿನ ನಂತರ ರಾಣಾ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಕಿಡ್ನಿ ಕಸಿ ಚಿಕಿತ್ಸೆಗಾಗಿ ಅವರು ಅಮೆರಿಕಕ್ಕೆ ತೆರಳಬೇಕಾಯಿತು. ಚಿಕಿತ್ಸೆಯ ನಂತರ ದೈಹಿಕವಾಗಿ ಅವರು ಸಾಕಷ್ಟು ಬದಲಾಗಿದ್ದರು. “ಆರೋಗ್ಯದ ಸಮಸ್ಯೆಯ ಮೊದಲು ನಾನು ಹೈದರಾಬಾದ್‌ನ ಹಾಟ್ ಗೈ ಎಂಬಂತೆ ಗುರುತಿಸಿಕೊಂಡಿದ್ದೆ. ಚಿಕಿತ್ಸೆಯ ನಂತರ ನಾನು ಮೊದಲಿನಂತೆ ಕಾಣುತ್ತಿರಲಿಲ್ಲ. ಆ ಸಮಯದಲ್ಲಿ ನಾನು ಕುಸ್ತಿಪಟುವಿನ ಕಥೆಯುಳ್ಳ ದೊಡ್ಡ ಚಿತ್ರಗಳನ್ನು ಮಾಡಬೇಕಿತ್ತು. ಆದರೆ ನನ್ನ ರೂಪ ಬದಲಾಗಿದ್ದರಿಂದ, ಅಂತಹ ಪಾತ್ರಗಳಿಗೆ ನಾನು ಸೂಕ್ತವಲ್ಲ ಎಂದು ಅನಿಸಿತು. ಹೀಗಾಗಿ ನಾನು ಪಡೆದಿದ್ದ ಸಿನಿಮಾಗಳ ಮುಂಗಡ ಹಣವನ್ನು (ಅಡ್ವಾನ್ಸ್) ನಿರ್ಮಾಪಕರಿಗೆ ವಾಪಸ್ ನೀಡಿದೆ” ಎಂದು ರಾಣಾ ಹೇಳಿದ್ದಾರೆ.
ಅಮೆರಿಕದಿಂದ ವಾಪಸ್ ಬರುವಾಗ ವಲಸೆ ಅಧಿಕಾರಿ ತನ್ನನ್ನು ‘ಕಿಂಗ್ ಭಲ್ಲಾಳದೇವ’ ಎಂದು ಕರೆದಾಗ ತಾವು ಯಾರಾಗಿದ್ದೆ ಎಂಬ ನೆನಪಾಯಿತು ಎಂದು ಅವರು ಸ್ಮರಿಸಿದ್ದಾರೆ. ನೋಟ ಬದಲಾದಾಗ ಅದನ್ನು ಒಪ್ಪಿಕೊಳ್ಳುವುದು ಕಷ್ಟವಾಗಿತ್ತು, ಒಂದು ವೇಳೆ ನಾನು ನಟನಾಗಿರದಿದ್ದರೆ ಈ ಬದಲಾವಣೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವೇನೋ ಎಂದು ರಾಣಾ ಭಾವನಾತ್ಮಕವಾಗಿ ನುಡಿದಿದ್ದಾರೆ. ಆರೋಗ್ಯ ಸುಧಾರಿಸಿದ ನಂತರ ರಾಣಾ ದಗ್ಗುಬಾಟಿ ಅವರು ಈಗ ಆಯ್ದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ‘ಕಾಂತ’ ಚಿತ್ರದಲ್ಲಿ ನಟಿಸಿರುವ ಅವರು, ‘ರಾಣಾ ನಾಯ್ಡು’ ವೆಬ್ ಸೀರೀಸ್ ಮತ್ತು ಟಾಕ್ ಶೋಗಳ ಮೂಲಕವೂ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ.

