ಇರಾನ್-ಇಸ್ರೇಲ್ ಸಂಘರ್ಷದ ಹಿನ್ನಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ವಿಮಾನ ಸಂಚಾರ ಸ್ಥಗಿತವಾಗಿದೆ. ಈಗಾಗಲೇ ಹಲವಾರು ವಿಮಾನಯಾನ ಕಂಪನಿಗಳು ಸಂಚಾರ ಆರಂಭಕ್ಕೂ ಮುನ್ನ ಸ್ಥಳೀಯ ಪರಿಸ್ಥಿತಿಗಳ ಕುರಿತು ಮಾಹಿತಿ ಪಡೆಯಿರಿ ಎಂದು ಪ್ರಯಾಣಿಕರಿಗೆ ಮನವಿ ಮಾಡಿವೆ.
ಇರಾನ್ ದಾಳಿಯ ಬಳಿಕ ದುಬೈನಲ್ಲಿ ಎಲ್ಲಾ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ. ಇವರಲ್ಲಿ ವಿಧಾನ ಪರಿಷತ್ ಸದಸ್ಯ ಮತ್ತು ಜೆಡಿಎಸ್ ನಾಯಕ ಎಸ್.ಎಲ್.ಭೋಜೇಗೌಡ ಸಹ ಸೇರಿದ್ದಾರೆ.
ಮಾಧ್ಯಮಗಳ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಅವರು, “ನಾನು ಜೋಹಾನ್ಸ್ ಬರ್ಗ್‌ನಿಂದ ದುಬೈ ಮೂಲಕ ಭಾರತಕ್ಕೆ ಬರಬೇಕಿತ್ತು. ಆದರೆ ದುಬೈನಲ್ಲಿ ಎಲ್ಲಾ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ವಿಮಾನದಲ್ಲಿ ಕುಳಿತಿದ್ದ ನಮ್ಮನ್ನು ಕೆಳಗಿಳಿಸಿ, ನಿಲ್ದಾಣದೊಳಗೆ ಬಿಟ್ಟಿದ್ದಾರೆ” ಎಂದು ಹೇಳಿದ್ದಾರೆ.
“ಮೊಬೈಲ್ ಬ್ಯಾಟರಿ ಚಾರ್ಜ್ ಕಡಿಮೆಯಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಭಾರೀ ಜನರಿದ್ದು, ಚಾರ್ಜ್ ಮಾಡುವುದು ಕಷ್ಟ. ಊಟ-ತಿಂಡಿಗೆ ಸಹ ಕಷ್ಟವಾಗುತ್ತಿದೆ. ಯಾವಾಗ ವಿಮಾನ ಸಂಚಾರ ಪುನಃ ಆರಂಭವಾಗುತ್ತದೆ ತಿಳಿದಿಲ್ಲ. ಜನರು ಆತಂಕದಲ್ಲಿದ್ದಾರೆ” ಎಂದು ಭೋಜೇಗೌಡ ಅಲ್ಲಿನ ಪರಿಸ್ಥಿತಿ ವಿವರಿಸಿದ್ದಾರೆ.
“ವೀಸಾ ಇದ್ದ ಜನರಿಗೆ ವಿಮಾನ ನಿಲ್ದಾಣದಿಂದ ಆಚೆ ಹೋಗಲು ಅವಕಾಶ ನೀಡಲಾಗಿದೆ. ನನ್ನ ಬಳಿ ಅಮೆರಿಕ ವೀಸಾ ಇದೆ. ಆದರೆ ಹೊರಗಡೆ ಪರಿಸ್ಥಿತಿ ಹೇಗಿದೆ? ಎಂಬುದು ತಿಳಿಯುತ್ತಿಲ್ಲ. ಆದ್ದರಿಂದ ಪತ್ನಿ ಜೊತೆಗೆ ವಿಮಾನ ನಿಲ್ದಾಣದಲ್ಲಿಯೇ ಇದ್ದೇನೆ” ಎಂದು ಭೋಜೋಗೌಡ ತಿಳಿಸಿದ್ದಾರೆ.

