HomeKarnatakaರಾಮನಗರ ನಕಲಿ ಔಷಧ ಜಾಲ ತನಿಖೆಗೆ SIT ಗೃಹ ಇಲಾಖೆಯಿಂದ ವಿಶೇಷ ಅಧಿಕಾರ ಕೋರಿಕೆ

ರಾಮನಗರ ನಕಲಿ ಔಷಧ ಜಾಲ ತನಿಖೆಗೆ SIT ಗೃಹ ಇಲಾಖೆಯಿಂದ ವಿಶೇಷ ಅಧಿಕಾರ ಕೋರಿಕೆ

ಬೆಂಗಳೂರು- ರಾಮನಗರದ ದೊಡ್ಡೇರಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಬೆಳಕಿಗೆ ಬಂದಿರುವ ನಕಲಿ ಔಷಧ ಜಾಲದ ತನಿಖೆ ಮತ್ತಷ್ಟು ವಿಸ್ತಾರಗೊಂಡಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ವಿಶೇಷ ಅಧಿಕಾರ ನೀಡುವಂತೆ ವಿಶೇಷ ತನಿಖಾ ತಂಡ (SIT) ಇದೀಗ ಗೃಹ ಇಲಾಖೆಯ ಮೊರೆ ಹೋಗಿದೆ.

ನಕಲಿ ಔಷಧ ದಂಧೆಯ ಹಿಂದೆ ಕೇವಲ ಸ್ಥಳೀಯ ಮಟ್ಟದ ಜಾಲವಷ್ಟೇ ಅಲ್ಲದೆ, ಅಂತರರಾಜ್ಯ ಮಟ್ಟದ ಸಂಪರ್ಕ ಇರುವ ಸಾಧ್ಯತೆ ತನಿಖೆಯಲ್ಲಿ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಆಗಸ್ಟ್ 18ರಂದು ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಸಮೀಪದ ಸಿ.ಕೆ. ತಾಂಡ್ಯ ಗ್ರಾಮದ ಫಾರ್ಮ್‌ಹೌಸ್ ಮೇಲೆ ಆರೋಗ್ಯ ಇಲಾಖೆ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವುದೇ ಅಗತ್ಯ ಪರವಾನಗಿ ಇಲ್ಲದೆ ನಡೆಯುತ್ತಿದ್ದ ಘಟಕದಲ್ಲಿ ನಕಲಿ ಔಷಧಗಳ ಮರುಪ್ಯಾಕಿಂಗ್ ಹಾಗೂ ಪ್ರತಿಷ್ಠಿತ ಔಷಧ ಕಂಪನಿಗಳ ಹೆಸರಿನ ಲೇಬಲ್ ಅಂಟಿಸುವ ದಂಧೆ ನಡೆಯುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು.

ದಾಳಿಯಲ್ಲಿ ಸುಮಾರು ₹5 ಕೋಟಿ ಮೌಲ್ಯದ ನಕಲಿ ಹಾಗೂ ಅನುಮಾನಾಸ್ಪದ ಔಷಧಗಳು, ಪ್ಯಾಕಿಂಗ್ ಸಾಮಗ್ರಿಗಳು, ಲೇಬಲ್‌ಗಳು, ಖಾಲಿ ಬಾಟಲಿಗಳು ಮತ್ತು ಅವಧಿ ಮೀರಿದ ಔಷಧಗಳನ್ನು ವಶಕ್ಕೆ ಪಡೆಯಲಾಗಿದೆ.

ಜಪ್ತಿಯಾದ ಒಟ್ಟು ಸರಕುಗಳ ಮೌಲ್ಯ ₹5 ಕೋಟಿಗೂ ಅಧಿಕವಾಗಿದ್ದು, ಮತ್ತೊಂದು ಅಂದಾಜಿನಲ್ಲಿ ಸುಮಾರು ₹6 ಕೋಟಿವರೆಗೂ ಮೌಲ್ಯವಿದೆ.

₹ *600ರ ಔಷಧಕ್ಕೆ ₹6 ಸಾವಿರದ ಲೇಬಲ್?*

ತನಿಖೆಯಲ್ಲಿ ಹೊರಬಂದಿರುವ ಆರೋಪಗಳ ಪ್ರಕಾರ, ಕಡಿಮೆ ಬೆಲೆಯ ಔಷಧಗಳನ್ನು ಹೊರರಾಜ್ಯಗಳಿಂದ ತರಿಸಿಕೊಂಡು ಅವುಗಳಿಗೆ ಪ್ರತಿಷ್ಠಿತ ಬಹುರಾಷ್ಟ್ರೀಯ ಔಷಧ ಕಂಪನಿಗಳ ಹೆಸರಿನ ನಕಲಿ ಲೇಬಲ್‌ಗಳನ್ನು ಅಂಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು.

ಸುಮಾರು ₹600 ಮೌಲ್ಯದ ಔಷಧಕ್ಕೆ ₹6,000 ಮೌಲ್ಯದ ಬ್ರ್ಯಾಂಡೆಡ್ ಔಷಧಿಯ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪವೂ ಇದೆ.

ಜಪ್ತಿಯಾದ ಔಷಧಗಳಲ್ಲಿ ಗಂಭೀರ ಸೋಂಕುಗಳಿಗೆ ಬಳಸುವ ಇಂಜೆಕ್ಷನ್‌ಗಳು ಸೇರಿದಂತೆ ತೀವ್ರ ನಿಗಾ ಘಟಕಗಳಲ್ಲಿ ಬಳಕೆಯಾಗುವ ಔಷಧಗಳೂ ಇದ್ದವು ಎಂಬ ಮಾಹಿತಿ ಆತಂಕ ಮೂಡಿಸಿದೆ.

ಇಂತಹ ಔಷಧಗಳು ಆಸ್ಪತ್ರೆಗಳು ಮತ್ತು ಫಾರ್ಮಸಿಗಳಿಗೆ ತಲುಪಿರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

*ನಾಲ್ವರು ಬಂಧನ,*

ಪ್ರಮುಖ ಆರೋಪಿ ವಿದೇಶದಲ್ಲಿರುವ ಶಂಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ತನಿಖಾ ವರದಿಗಳು ತಿಳಿಸಿವೆ.

ಫಾರ್ಮ್‌ಹೌಸ್ ಅನ್ನು ಬಾಡಿಗೆಗೆ ಪಡೆದು ದಂಧೆ ನಡೆಸುತ್ತಿದ್ದರೆನ್ನಲಾದ ಆರ್. ಪ್ರಶಾಂತ್ ಪ್ರಮುಖ ಆರೋಪಿಯಾಗಿದ್ದು, ಆತ ವಿದೇಶದಲ್ಲಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಯಾಗಿದೆ.

ಔಷಧ ಖರೀದಿ, ಮರುಪ್ಯಾಕಿಂಗ್, ಲೇಬಲಿಂಗ್ ಮತ್ತು ವಿತರಣೆ ಹಂತಗಳಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

*ಪೋರ್ಟರ್ ಆ್ಯಪ್ ಮೂಲಕವೂ ಸರಬರಾಜು?*

ಇದೀಗ ತನಿಖೆಯಲ್ಲಿ ಮತ್ತೊಂದು ಮಹತ್ವದ ಅಂಶ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಕುಳಿತು ರಾಮನಗರದ ಫಾರ್ಮ್‌ಹೌಸ್‌ನಿಂದ ನಕಲಿ ಔಷಧಗಳನ್ನು ಸಾಗಿಸಲು ಖಾಸಗಿ ಡೆಲಿವರಿ ಸೇವೆಯಾದ ‘ಪೋರ್ಟರ್’ ಆ್ಯಪ್ ಬಳಸಲಾಗುತ್ತಿತ್ತು ಎಂಬ ಮಾಹಿತಿ ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿದೆ.

ವಾರದಲ್ಲಿ ಹಲವು ಬಾರಿ ವಾಹನಗಳು ಫಾರ್ಮ್‌ಹೌಸ್‌ಗೆ ಬಂದು ಹೋಗುತ್ತಿದ್ದವು ಎನ್ನಲಾಗಿದ್ದು, ಈ ಚಟುವಟಿಕೆಗಳ ಬಗ್ಗೆ ಸ್ಥಳೀಯರಿಗೆ ಅನುಮಾನ ಮೂಡಿತ್ತು.

ಸ್ಥಳೀಯರಿಂದ ಪೊಲೀಸರಿಗೆ ದೊರೆತ ಮಾಹಿತಿ ಪ್ರಕರಣ ಬಯಲಿಗೆ ಬರಲು ಪ್ರಮುಖ ಕಾರಣವಾಯಿತು.

*ಅಂತರರಾಜ್ಯ ಜಾಲದ ಶಂಕೆ*

ರಾಮನಗರ ಮತ್ತು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಹಿಮಾಚಲ ಪ್ರದೇಶ, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಿಂದ ಔಷಧಗಳನ್ನು ತರಿಸಿಕೊಂಡಿರುವ ಸಾಧ್ಯತೆ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ಐದು ರಾಜ್ಯಗಳಿಗೆ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ.

ಹೀಗಾಗಿ ಇದು ಕರ್ನಾಟಕದೊಳಗಿನ ದಂಧೆಯೇ ಅಥವಾ ದೇಶವ್ಯಾಪಿ ಜಾಲದ ಭಾಗವೇ ಎಂಬುದನ್ನು ಪತ್ತೆಹಚ್ಚುವುದು ತನಿಖೆಯ ಪ್ರಮುಖ ಗುರಿಯಾಗಿದೆ.

SIT ರಚನೆಯಾದರೂ ಕಾನೂನು ತೊಡಕು

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ಆರು ಸದಸ್ಯರ SIT ರಚಿಸಿದೆ.

ಬೆಂಗಳೂರಿನ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಆದರೆ ಔಷಧ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆ ಕಾಯ್ದೆಗೆ ಸಂಬಂಧಿಸಿದ ಅಪರಾಧಗಳ ಕುರಿತು ತನಿಖೆ ನಡೆಸುವ ಅಧಿಕಾರ ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿರುವುದರಿಂದ SITಗೆ ಎದುರಾಗಿರುವ ಕಾನೂನು ವ್ಯಾಪ್ತಿಯ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.

ಇದೇ ಕಾರಣಕ್ಕೆ ಔಷಧ ಸಂಬಂಧಿತ ಅಪರಾಧಗಳ ಸಂಪೂರ್ಣ ತನಿಖೆ ನಡೆಸಲು ವಿಶೇಷ ಅಧಿಕಾರ ನೀಡುವಂತೆ ಗೃಹ ಇಲಾಖೆಗೆ ಮನವಿ ಸಲ್ಲಿಸಲು SIT ಮುಂದಾಗಿದೆ.

*ಆಸ್ಪತ್ರೆಗಳಿಗೆ ಔಷಧ ತಲುಪಿದೆಯೇ? ತನಿಖೆಯ ಕೇಂದ್ರಬಿಂದು*

ಈ ಪ್ರಕರಣದಲ್ಲಿ ಅತ್ಯಂತ ಗಂಭೀರವಾಗಿ ಪರಿಶೀಲಿಸಬೇಕಾದ ಅಂಶವೆಂದರೆ ಜಪ್ತಿಯಾದ ನಕಲಿ ಔಷಧಗಳು ಈಗಾಗಲೇ ಆಸ್ಪತ್ರೆಗಳು, ಆಸ್ಪತ್ರೆಗಳ ಫಾರ್ಮಸಿಗಳು ಅಥವಾ ಇತರ ಮಾರ್ಗಗಳ ಮೂಲಕ ರೋಗಿಗಳ ಕೈಗೆ ತಲುಪಿವೆಯೇ ಎಂಬುದು. ಔಷಧಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಅವುಗಳ ಗುಣಮಟ್ಟ, ರಾಸಾಯನಿಕ ಸಂಯೋಜನೆ, ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಪರಿಶೀಲಿಸಲಾಗುತ್ತಿದೆ.

ಔಷಧಗಳು ಸಾಮಾನ್ಯ ಚಿಲ್ಲರೆ ಮಾರಾಟ ಜಾಲದ ಮೂಲಕವೇ ಹೋದವೆಯೇ ಅಥವಾ ಆಸ್ಪತ್ರೆಗಳು, ಮಧ್ಯವರ್ತಿಗಳು ಮತ್ತು ಆನ್‌ಲೈನ್ ಮಾರ್ಗಗಳ ಮೂಲಕ ಪೂರೈಕೆಯಾಗಿವೆಯೇ ಎಂಬುದನ್ನೂ ತನಿಖೆ ಮಾಡಲಾಗುತ್ತಿದೆ.

*ಜಾಲ ಬಯಲಿಗೆಳೆಯುವ ಸವಾಲು*

ರಾಮನಗರದ ಫಾರ್ಮ್‌ಹೌಸ್ ದಾಳಿ ಒಂದು ನಕಲಿ ಔಷಧ ಘಟಕ ಪತ್ತೆಯಾದ ಪ್ರಕರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಔಷಧಗಳ ಮೂಲ, ಅವುಗಳನ್ನು ರಾಜ್ಯಕ್ಕೆ ತರಿಸಿದವರು, ಮರುಪ್ಯಾಕಿಂಗ್ ಮಾಡಿದವರು, ನಕಲಿ ಲೇಬಲ್‌ಗಳನ್ನು ಸಿದ್ಧಪಡಿಸಿದವರು, ಸಾರಿಗೆ ವ್ಯವಸ್ಥೆ, ಮಧ್ಯವರ್ತಿಗಳು, ಆಸ್ಪತ್ರೆಗಳು ಮತ್ತು ಔಷಧ ಮಾರಾಟ ಜಾಲದವರೆಗೆ ತನಿಖೆ ವಿಸ್ತರಿಸುವ ಅಗತ್ಯ ಎದುರಾಗಿದೆ.

ಸಾರ್ವಜನಿಕರ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದ ಪ್ರಕರಣವಾಗಿರುವುದರಿಂದ, ನಕಲಿ ಔಷಧಗಳ ಪೂರೈಕೆ ಸರಪಳಿಯನ್ನು ಸಂಪೂರ್ಣವಾಗಿ ಪತ್ತೆಹಚ್ಚಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಸರ್ಕಾರ ಮತ್ತು ತನಿಖಾ ಸಂಸ್ಥೆಗಳ ಮುಂದಿರುವ ಪ್ರಮುಖ ಸವಾಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular