ಬೆಂಗಳೂರು: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ನೊಂದು ಯುವತಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಾಣಿ (22 )ಆತ್ಮಹತ್ಯೆಗೆ ಶರಣಾದ ಯುವತಿ. ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅಗರ ಕೆರೆಗೆ ಹಾರಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್‌ನೋಟ್ ಪತ್ತೆಯಾಗಿದೆ.
ಅದರಲ್ಲಿ ಕ್ಲಾಸ್‌ಮೇಟ್ ಅಭಿಷೇಕ್ ಎಂಬಾತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ತಿಳಿಸಿದ್ದಾಳೆ. ಯುವತಿ ವಾಣಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಮಕ್ಕಿ ಗ್ರಾಮದವಳು.
ಅಭಿಷೇಕ್, ಯುವತಿಗೆ ವಾಟ್ಸಪ್‌ನಲ್ಲಿ ವಿಡಿಯೋ, ಫೋಟೋಸ್ ಕಳುಹಿಸಿ ಬ್ಲಾಕ್‌ಮೇಲ್ ಮಾಡುತಿದ್ದ. ಕರೆದಾಗಲೆಲ್ಲ ರೂಮಿಗೆ ಬರಬೇಕು ಎಂದು ಮೆಸೇಜ್ ಮಾಡುತ್ತಿದ್ದ. ನಮ್ಮ ಕುಟುಂಬದ ಮರ್ಯಾದೆ ಹೋಗಬಾರದು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅಭಿಷೇಕ್‌ಗೆ ಶಿಕ್ಷೆ ಆಗಬೇಕು ಎಂದು ಡೆತ್‌ನೋಟ್‌ನಲ್ಲಿ ಯುವತಿ ಉಲ್ಲೇಖಿಸಿದ್ದಾಳೆ.
ಕಾಲೇಜು ದಿನಗಳಲ್ಲಿ ವಾಣಿ ಮತ್ತು ಅಭಿಷೇಕ್ ಒಟ್ಟಿಗೆ ಓದುತ್ತಿದ್ದರು. ಸುಮಾರು ಒಂದು ವರ್ಷದ ಹಿಂದೆ ಯುವತಿ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದಳು. ಚಿನ್ನದ ಅಂಗಡಿಯೊಂದರಲ್ಲಿ ಆಕೆ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಹೆಚ್‌ಎಸ್‌ಆರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ಅಭಿಷೇಕ್ ಪತ್ತೆಗೆ ಪೊಲೀಸರು ಹುಡುಕಾಅಟ ನಡೆಸಿದ್ದಾರೆ.

