ಚಿತ್ರದುರ್ಗ ಜಿಲ್ಲೆಯ ರೈಲ್ವೆ ಯೋಜನೆಗಳ ಕುರಿತು ಅಪ್‌ಡೇಟ್ ಇಲ್ಲಿದೆ. ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಂಸದ ಗೋವಿಂದ ಕಾರಜೋಳ ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನರ ಬಹುಕಾಲದ ರೈಲ್ವೆ ಸಂಬಂಧಿತ ಬೇಡಿಕೆಗಳ ಕುರಿತು ವಿವರವಾದ ಮನವಿಯನ್ನು ಸಲ್ಲಿಸಿದೆನು. ಮಾನ್ಯ ರೈಲ್ವೆ ಸಚಿವರು ಮನವಿಯನ್ನು ಗಮನವಿಟ್ಟು ಆಲಿಸಿ, ಕಾರ್ಯಾಚರಣಾ ಸಾಧ್ಯತೆಗಳ ಆಧಾರದ ಮೇಲೆ ಸಹಾನುಭೂತಿಯುತವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದರು ಎಂದು ಸಂಸದರು ಪೋಸ್ಟ್ ಹಾಕಿದ್ದಾರೆ.
ಈ ಎಲ್ಲಾ ಯೋಜನೆಗಳು ಜಾರಿಯಾದಲ್ಲಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನರಿಗೆ ಉತ್ತಮ ಸಂಪರ್ಕತೆ, ಆರ್ಥಿಕ ಬೆಳವಣಿಗೆ ಹಾಗೂ ಸಮಗ್ರ ಅಭಿವೃದ್ಧಿಗೆ ಮಹತ್ತರವಾದ ಉತ್ತೇಜನ ದೊರೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ
ಈ ಸಂದರ್ಭದಲ್ಲಿ ಕ್ಷೇತ್ರದ ವಿದ್ಯಾರ್ಥಿಗಳು, ರೈತರು, ವ್ಯಾಪಾರಸ್ಥರು, ಹಿರಿಯ ನಾಗರಿಕರು ಹಾಗೂ ಸಾಮಾನ್ಯ ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಳಕಂಡ ಪ್ರಮುಖ ವಿಷಯಗಳನ್ನು ಮಂಡಿಸಲಾಯಿತು ನನ್ನ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾನು ಸದಾ ಬದ್ಧನಾಗಿದ್ದೇನೆ ಎಂದು ಸಂಸದರು ಹೇಳಿದ್ದಾರೆ.
ಯಾವ-ಯಾವ ಯೋಜನೆಗಳು
* ಹೊಸದುರ್ಗ ರಸ್ತೆ, ಹೊಳಲ್ಕೆರೆ, ರಾಮಗಿರಿ, ಚಿಕ್ಕಜಾಜೂರು ಹಾಗೂ ಚಳ್ಳಕೆರೆ ರೈಲು ನಿಲ್ದಾಣಗಳಲ್ಲಿ ಪ್ರಮುಖ ಎಕ್ಸ್‌ಪ್ರೆಸ್ ಮತ್ತು ಇಂಟರ್‌ಸಿಟಿ ರೈಲುಗಳಿಗೆ ನಿಲುಗಡೆ ಒದಗಿಸುವಂತೆ ವಿನಂತಿಸಲಾಯಿತು.
* ರೋಡ್ ಓವರ್ ಬ್ರಿಡ್ಜ್ (ROB) / ರೋಡ್ ಅಂಡರ್ ಬ್ರಿಡ್ಜ್ (RUB) ಹಾಗೂ ಮೂಲಸೌಕರ್ಯ ಅಭಿವೃದ್ಧಿ. ಹಿರಿಯೂರು ತಾಲ್ಲೂಕಿನ ಪಳವ್ವನಹಳ್ಳಿ ಗ್ರಾಮದಲ್ಲಿ RUB ಹಾಗೂ ಸರ್ವೀಸ್ ರಸ್ತೆ ನಿರ್ಮಾಣ.
* ಚಳ್ಳಕೆರೆ ಪಟ್ಟಣದಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 45ರಲ್ಲಿ ROB/ಫ್ಲೈಓವರ್ ನಿರ್ಮಾಣ.
* ಹೊಸದುರ್ಗ–ಚಿಕ್ಕಜಾಜೂರು ನಡುವಿನ ರಾಮಗಿರಿ ಬಳಿ ಲೆವೆಲ್ ಕ್ರಾಸಿಂಗ್ ಸಂಖ್ಯೆ 77Aರಲ್ಲಿ ROB/RUB ನಿರ್ಮಾಣ.
* ಶ್ರೀರಂಗಪಟ್ಟಣ–ಜೆವರ್ಗಿ ರಾಷ್ಟ್ರೀಯ ಹೆದ್ದಾರಿ 150A ಮತ್ತು ಬೇಡರೆಡ್ಡಿಹಳ್ಳಿ ರಸ್ತೆಯ ನಡುವಿನ ಕಡಿಮೆ ಮಟ್ಟದ ರೈಲು ದಾಟುವಲ್ಲಿ ROB/RUB ನಿರ್ಮಾಣ.
* ದಾವಣಗೆರೆ–ಚಿತ್ರದುರ್ಗ ಮುಖ್ಯರಸ್ತೆಯಿಂದ ಚಿತ್ರದುರ್ಗ ರೈಲು ನಿಲ್ದಾಣ ಪ್ರವೇಶದವರೆಗೆ (ಸುಮಾರು 200 ಮೀಟರ್) ಸಿಸಿ ರಸ್ತೆ ನಿರ್ಮಾಣ.
ಈ ಯೋಜನೆಗಳು ಸಾರ್ವಜನಿಕರ ಸುರಕ್ಷತೆ ಹೆಚ್ಚಿಸಲು, ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ಉತ್ತಮ ಸಂಪರ್ಕತೆಯನ್ನು ಸಾಧಿಸಲು ಅತ್ಯಂತ ಅವಶ್ಯಕವಾಗಿವೆ.
ಸ್ಥಗಿತಗೊಂಡ ರೈಲುಗಳ ಪುನರಾರಂಭ ಹಾಗೂ ವಿಸ್ತರಣೆ
- ಹೊಸಪೇಟೆ–ಬೆಂಗಳೂರು ರಾತ್ರಿ ರೈಲನ್ನು (ಚಿತ್ರದುರ್ಗ ಮಾರ್ಗವಾಗಿ) ಮರುಪ್ರಾರಂಭಿಸುವುದು.
- ಶಿವಮೊಗ್ಗ–ಚೆನ್ನೈ ರೈಲನ್ನು ಮರುಪ್ರಾರಂಭಿಸುವುದು.
- ಹುಬ್ಬಳ್ಳಿ–ಚಿಕ್ಕಜಾಜೂರು ರೈಲನ್ನು ಚಿತ್ರದುರ್ಗದವರೆಗೆ ವಿಸ್ತರಿಸುವುದು.
- ಸ್ಥಗಿತಗೊಂಡ ಇತರ ರೈಲು ಸೇವೆಗಳನ್ನು ಪುನಃ ಆರಂಭಿಸುವುದು.
ಹೊಸ ರೈಲುಗಳ ಪರಿಚಯ
• ಬೀದರ್–ಮಂಗಳೂರು (ಚಿತ್ರದುರ್ಗ ಮಾರ್ಗವಾಗಿ) ಹೊಸ ರೈಲು ಆರಂಭಿಸಿ, ಮಣಿಪಾಲ್ ಮತ್ತು ಮಂಗಳೂರು ಆಸ್ಪತ್ರೆಗಳಿಗೆ ತೆರಳುವ ರೋಗಿಗಳಿಗೆ ಅನುಕೂಲ ಕಲ್ಪಿಸುವುದು.
• ವಿಜಯಪುರ (ಬಿಜಾಪುರ)–ಮೈಸೂರು (ಚಿತ್ರದುರ್ಗ ಮಾರ್ಗವಾಗಿ) ಹೊಸ ರೈಲು ಆರಂಭಿಸುವುದು.
• ಶಿವಮೊಗ್ಗ–ಹೊಸಪೇಟೆ (ಚಿತ್ರದುರ್ಗ ಮಾರ್ಗವಾಗಿ) ಹೊಸ ರೈಲು ಪ್ರಾರಂಭಿಸುವುದು.

