ರಾಯಚೂರು: ಮಠ ಸ್ಥಾಪಿಸಿಕೊಂಡು ಆಧ್ಯಾತ್ಮ ಜೀವನ ಸಾಗಿಸುತ್ತಿದ್ದ ಸ್ವಾಮೀಜಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ನಡೆದಿದೆ.
ದೇವೇಂದ್ರಪ್ಪ (58) ಮಠದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಸ್ವಾಮೀಜಿ. ಇವರು ಮುಳ್ಳೂರು (ಇಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮದವರಾದ ದೇವೇಂದ್ರಪ್ಪ, ಕಳೆದ ಎರಡು ದಶಕಗಳಿಂದ ಸಿಂಧನೂರಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ನಡುವೆ ವೈರಾಗ್ಯ ಜೀವನದತ್ತ ಮುಖ ಮಾಡಿ, ಬಸಾಪುರ ಗ್ರಾಮದಲ್ಲಿ ಶಿವಾನಂದ ಜಗದ್ಗುರು ನಾಮಧಾರಿ ಮಠವನ್ನು ಸ್ಥಾಪಿಸಿ, ಸ್ವಾಮೀಜಿಯಾಗಿ ಗುರುತಿಸಿಕೊಂಡಿದ್ದರು. ಖಾವಿ ವಸ್ತ್ರ ಧರಿಸಿ ಜನರಿಗೆ ಧಾರ್ಮಿಕ ಪ್ರವಚನ ನೀಡುತ್ತಿದ್ದರು.
ಈಗ ಇದ್ದಕ್ಕಿದ್ದಂತೆ ಮಠದಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಗ್ರಾಮಸ್ಥರು ಹಾಗೂ ಭಕ್ತರು ಆಘಾತಗೊಳ್ಳುವಂತೆ ಮಾಡಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸ್ವಾಮೀಜಿ ಆತ್ಮಹತ್ಯೆ ಹಲವು ಅನುಮಾನಕ್ಕೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ತುರುವಿಹಾಳ ಠಾಣೆ ಪಿಎಸ್ಐ ಸುಜಾತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಮೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

