ಮೈಸೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ಧ ಮೈಸೂರು ಜಿಲ್ಲೆಯ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಟಿ.ನರಸೀಪುರದಲ್ಲಿ ಗಣೇಶ ಮೂರ್ತಿ ಕೂರಿಸುವ ವಿಚಾರಕ್ಕೆ ಇನ್ಸ್ಪೆಕ್ಟರ್ ಧನಂಜಯ್ ಧಮ್ಕಿಗೆ ಸವಾಲಾಗಿ ನಡೆದ ಶೋಭಾಯಾತ್ರೆ ವೇಳೆ ಪ್ರತಾಪ್ ಸಿಂಹ ಪ್ರಚೋದನಕಾರಿ ಭಾಷಣ ಮಾಡಿದ್ದರು.
ಈ ಹಿನ್ನೆಲೆ ಪ್ರತಾಪ್ ಸಿಂಹ ಮತ್ತು ಇತರರ ವಿರುದ್ಧ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 132, 191, 194, 196(1)(ಎ)(ಬಿ), 299, 353(1)(ಬಿ)(ಸಿ) ಹಾಗೂ ಸೆಕ್ಷನ್ 190ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಾರ್ವಜನಿಕ ಸೇವಕರು ಮತ್ತು ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪ ಹಾಗೂ ಗುಂಪುಗಳು ಹಾಗೂ ಜಾತಿಗಳ ನಡುವೆ ದ್ವೇಷ ಉತ್ತೇಜನೆ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮತ್ತು ಪ್ರಚೋದನಕಾರಿ ಭಾಷಣಗಳ ಆರೋಪ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

