ಮಂಗಳೂರು- ನಾಗರಕೋಯಿಲ್ ನಡುವಿನ ಅಮೃತ್ ಭಾರತ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿದ್ದಾರೆ. ಇದು ಮಂಗಳೂರು ನಗರದ ಮೊದಲ ಅಮೃತ್ ಭಾರತ್ ರೈಲು. ಆದರೆ ಈ ರೈಲಿನ ವಿಚಾರದಲ್ಲಿ ಪ್ರಯಾಣಿಕರು ಅಸಮಾಧಾನಗೊಂಡಿದ್ದಾರೆ, ಇಲಾಖೆ ಮುಂದೆ ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ.
ಈ ರೈಲಿನ ವೇಗದ ಕುರಿತು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 700 ಕಿ.ಮೀ. ಸಂಚಾರ ನಡೆಸಲು ರೈಲು 17.2 ಗಂಟೆ ತೆಗೆದುಕೊಳ್ಳುತ್ತದೆ. ಈ ರೈಲನ್ನು ಒಂದು ಕಡೆ ಕನ್ಯಾಕುಮಾರಿ ಮತ್ತು ಇನ್ನೊಂದು ಕಡೆ ಸುಬ್ರಮಣ್ಯ ರೋಡ್ ತನಕ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ರೈಲಿನ ವೇಗ ಹೆಚ್ಚಿಸಬೇಕು. ಅಲ್ಲದೇ ಸುಬ್ರಮಣ್ಯ ರೋಡ್ ಅಥವ ವಾಸ್ಕೋ-ಡಾ-ಗಾಮ ತನಕ ವಿಸ್ತರಣೆ ಮಾಡಿದರೆ ಇನ್ನು ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಕನ್ಯಾಕುಮಾರಿ ರೈಲು ಬಳಕೆದಾರರ ವೇದಿಕೆ ಕಾರ್ಯದರ್ಶಿ ಪಿ.ಎರ್ವರ್ಡ್ ಮಾತನಾಡಿ, “ರೈಲು ನಂಬರ್ 16329/ 330 ನಾಗರಕೋಯಿಲ್ ಜಂಕ್ಷನ್-ಮಂಗಳೂರು ಜಂಕ್ಷನ್ ಅಮೃತ್ ಭಾರತ ವಾರದ ರೈಲಿನ ವೇಳಾಪಟ್ಟಿ ರಾತ್ರಿ ಸಂಚಾರಕ್ಕೆ ಸೂಕ್ತವಾಗಿಲ್ಲ. ಈ ರೈಲು ಹಗಲು ಹೊತ್ತಿನಲ್ಲಿ ಸಂಚಾರ ನಡೆಸುವಂತೆ ಬದಲಾವಣೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ನಾಗರಕೋಯಿಲ್ ಜಂಕ್ಷನ್ನಿಂದ ಮಂಗಳವಾರ ಬೆಳಗ್ಗೆ 11.40ಕ್ಕೆ ಹೊರಡುವ ರೈಲು ಸಂಖ್ಯೆ 16329 ಮಂಗಳೂರು ಜಂಕ್ಷನ್ಗೆ 5 ಗಂಟೆಗೆ ಆಗಮಿಸುತ್ತದೆ. ಕಾಸರಗೋಡು-ಮಂಗಳೂರು ನಡುವೆ ಭಾರೀ ವಿಳಂಬವಾಗುತ್ತದೆ. ಉಳಿದ ರೈಲುಗಳು ಈ ಮಾರ್ಗದಲ್ಲಿ 35 ರಿಂದ 40 ನಿಮಿಷದಲ್ಲಿ ಸಂಚಾರ ನಡೆಸಿದರೆ ಈ ರೈಲು 3 ಗಂಟೆ ತಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
21 ನಿಲುಗಡೆ ಇರುವ ಈ ರೈಲು 54 ನಿಲುಗಡೆ ಇರುವ ರೈಲಿಗಿಂತ ನಿಧಾನವಾಗಿ ಸಂಚಾರವನ್ನು ನಡೆಸುತ್ತದೆ. ಆದ್ದರಿಂದ ರೈಲಿನ ವೇಳಾಪಟ್ಟಿ ಬದಲಾವಣೆ, ವೇಗವನ್ನು ಹೆಚ್ಚಿಸಲು ಇಲಾಖೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ರೈಲ್ವೆ ಇಲಾಖೆ ಪ್ರಯಾಣಿಕರ ವೇದಿಕೆಗಳ ಜೊತೆ ಸಭೆ ಮಾಡದೇ ಈ ರೈಲಿನ ವೇಳಾಪಟ್ಟಿಯನ್ನು ರಚನೆ ಮಾಡಿದೆ. ನಾಗರಕೋಯಿಲ್ ಜಂಕ್ಷನ್ ಕಡೆ ಕನ್ಯಾಕುಮಾರಿ ತನಕ ಮತ್ತು ಮಂಗಳೂರು ಜಂಕ್ಷನ್ ಕಡೆ ವಾಸ್ಕೋ-ಡಾ-ಗಾಮ ಕಡೆಗೆ ರೈಲನ್ನು ವಿಸ್ತರಣೆ ಮಾಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಕನ್ಯಾಕುಮಾರಿಯಿಂದ ರೈಲು ಬೆಳಗ್ಗೆ 10 ಗಂಟೆಗೆ ಹೊರಟು ವಾಸ್ಕೋ-ಡಾ-ಗಾಮಕ್ಕೆ 2 ಗಂಟೆಗೆ ತಲುಪುವಂತೆ ವೇಳಾಪಟ್ಟಿ ಬದಲಾವಣೆ ಮಾಡಬೇಕಿದೆ. ವಾಸ್ಕೋ-ಡಾ-ಗಾಮದಿಂದ 2 ಗಂಟೆಗೆ ಹೊರಟು ಮರುದಿನ ಮಧ್ಯಾಹ್ನ ಕನ್ಯಾಕುಮಾರಿ ತಲುಪುವಂತೆ ರೈಲು ಸೇವೆ ವಿಸ್ತರಣೆ ಮಾಡಿ, ವೇಳಾಪಟ್ಟಿ ಬದಲಾವಣೆ ಮಾಡಿ ಎಂದು ಆಗ್ರಹಿಸಲಾಗಿದೆ.
ಈಗಾಗಲೇ ನಾಗರಕೋಯಿಲ್ ಜಂಕ್ಷನ್-ಮಂಗಳೂರು ನಡುವೆ 4 ಜೋಡಿ ರೈಲುಗಳಿವೆ. ಆದರೆ ಅಮೃತ್ ಭಾರತ್ ರೈಲು ಸಂಚಾರಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸ್ಲೀಪರ್ ರೈಲುಗಳು ಇದಕ್ಕಿಂತ ವೇಗವಾಗಿ ಸಂಚಾರ ನಡೆಸುತ್ತಿವೆ ಎಂದು ಪುತ್ತೂರಿನ ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ತಿರುವನಂತಪುರಂ ಮತ್ತು ಕುಕ್ಕೆ ಸುಬ್ರಮಣ್ಯ ನಡುವೆ ನೂರಾರು ಪ್ರಯಾಣಿಕರು ಸಂಚಾರವನ್ನು ನಡೆಸುತ್ತಾರೆ. ಆದ್ದರಿಂದ ಈ ಅಮೃತ್ ಭಾರತ್ ರೈಲನ್ನು ಮಂಗಳೂರು ಜಂಕ್ಷನ್ನಿಂದ ಸುಬ್ರಮಣ್ಯ ರೋಡ್ ತನಕ ವಿಸ್ತರಣೆ ಮಾಡಿದರೆ ದೇವಾಲಯದ ಭಕ್ತರಿಗೆ ಅನುಕೂಲವಾಗುತ್ತದೆ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

