ವಾರಾಂತ್ಯ ಬಂತೆಂದರೆ ಸಾಕು ಮನೆಯಲ್ಲಿ ಏನಾದರೂ ವಿಶೇಷ ತಿಂಡಿ ಇರಲೇಬೇಕು ಎಂಬುದು ಎಲ್ಲರ ಆಸೆ. ಅದರಲ್ಲೂ ಮನೆಯಲ್ಲಿ ಪಾರ್ಟಿ ಅಥವಾ ಸಣ್ಣ ಸಮಾರಂಭಗಳಿದ್ದರೆ ಅತಿಥಿಗಳಿಗೆ ನೀಡಲು ರುಚಿಕರವಾದ ಸ್ನಾಕ್ಸ್ ಹುಡುಕಾಟ ನಡೆಸುತ್ತೇವೆ. ನೀವು ಪನೀರ್ ಪ್ರಿಯರಾಗಿದ್ದರೆ ಮತ್ತು ಚೈನೀಸ್ ಶೈಲಿಯ ಖಾರವಾದ ತಿಂಡಿಗಳನ್ನು ಇಷ್ಟ ಪಡುವುದಾದರೆ ಪನೀರ್ ಶೆಜ್ವಾನ್ ಬ್ರೆಡ್ ರೋಲ್ ಅತ್ಯುತ್ತಮ ಆಯ್ಕೆಯಾಗಿದೆ. ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಸುಲಭವಾಗಿ ತಯಾರಿಸಬಹುದಾದ ಈ ತಿಂಡಿಯ ಪೂರ್ಣ ವಿವರ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
ಸುಮಾರು 250 ಗ್ರಾಂ ಪುಡಿ ಮಾಡಿದ ಪನೀರ್, ಅರ್ಧ ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ, ಅರ್ಧ ಕಪ್ ಕ್ಯಾಪ್ಸಿಕಂ, ಎರಡು ಚಮಚ ಶೆಜ್ವಾನ್ ಸಾಸ್, ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎರಡು ಚಮಚ ಸೋಯಾ ಸಾಸ್, ಅಗತ್ಯಕ್ಕೆ ತಕ್ಕಷ್ಟು ಉಪ್ಪು ಮತ್ತು ಎಣ್ಣೆ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ ಐದಾರು ಬ್ರೆಡ್ ಸ್ಲೈಸ್‌ಗಳು ಬೇಕಾಗುತ್ತವೆ.
ತಯಾರಿಸುವ ಸರಳ ವಿಧಾನ
ಮೊದಲು ಬ್ರೆಡ್ ಒಳಗಿನ ಮಸಾಲೆಯನ್ನು ಸಿದ್ಧಪಡಿಸಿಕೊಳ್ಳಬೇಕು. ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಹೆಚ್ಚಿದ ಈರುಳ್ಳಿ ಮತ್ತು ಕ್ಯಾಪ್ಸಿಕಂ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ತರಕಾರಿಗಳು ಸ್ವಲ್ಪ ಮೆತ್ತಗಾದ ನಂತರ ಅದಕ್ಕೆ ಪುಡಿ ಮಾಡಿದ ಪನೀರ್, ಸೋಯಾ ಸಾಸ್, ಶೆಜ್ವಾನ್ ಸಾಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಗುಚಬೇಕು. ಮಸಾಲೆ ಪನೀರ್ ಜೊತೆ ಬೆರೆತು ಹದವಾಗಿ ಬೆಂದ ನಂತರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ತಣ್ಣಗಾಗಲು ಬಿಡಿ.
ನಂತರ ಬ್ರೆಡ್ ಸ್ಲೈಸ್‌ಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಲಟ್ಟಣಿಗೆಯ ಸಹಾಯದಿಂದ ಬ್ರೆಡ್ ಅನ್ನು ತೆಳುವಾಗಿ ಒತ್ತಿಕೊಳ್ಳಿ. ಅದರ ಮಧ್ಯದಲ್ಲಿ ಸಿದ್ಧಪಡಿಸಿದ ಪನೀರ್ ಮಸಾಲೆಯನ್ನು ಇಟ್ಟು, ಮತ್ತೊಂದು ಬ್ರೆಡ್ ಸ್ಲೈಸ್‌ನಿಂದ ಮುಚ್ಚಿ. ಬ್ರೆಡ್‌ನ ಅಂಚುಗಳಿಗೆ ಸ್ವಲ್ಪ ನೀರು ಹಚ್ಚಿ ಅದು ಬಿಟ್ಟು ಹೋಗದಂತೆ ಸರಿಯಾಗಿ ಒತ್ತಿ ಮುಚ್ಚಬೇಕು.
ಕೊನೆಯದಾಗಿ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಸಿದ್ಧಪಡಿಸಿದ ರೋಲ್ ಅನ್ನು ಎರಡು ಬದಿಗಳಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಬೇಕು. ಈಗ ಗರಿಗರಿಯಾದ ಮತ್ತು ರುಚಿಕರವಾದ ಪನೀರ್ ಶೆಜ್ವಾನ್ ಬ್ರೆಡ್ ರೋಲ್ ಸವಿಯಲು ಸಿದ್ಧ. ಇದನ್ನು ಪುದೀನಾ ಚಟ್ನಿ ಅಥವಾ ಸಾಸ್ ಜೊತೆಗೆ ಬಿಸಿಯಾಗಿ ಸವಿಯಬಹುದು.

