ಬೆಂಗಳೂರು: ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ರಿಟರ್ನಿಂಗ್ ಅಧಿಕಾರಿಗಳು ಮತ್ತು ಸಹಾಯಕ ರಿಟರ್ನಿಂಗ್ ಅಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ರಾಜ್ಯ ಚುನಾವಣಾ ಆಯೋಗವು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.
ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ) ನಿಯಮಗಳು, 1993ರ ನಿಯಮ 6ರಡಿ ಜಿಲ್ಲಾಧಿಕಾರಿಗಳು ಈ ನೇಮಕಾತಿ ಮಾಡಬೇಕಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಜಿಲ್ಲಾ ಪಂಚಾಯತ್:
ಒಂದು ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲಾ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಒಬ್ಬ ಗುಂಪು ‘ಎ’ ವರ್ಗದ ಅಥವಾ ಸಮಾನ ಹುದ್ದೆಯ ಅಧಿಕಾರಿಯನ್ನು ಗುರುತಿಸಿ ರಿಟರ್ನಿಂಗ್ ಅಧಿಕಾರಿಯನ್ನಾಗಿ ನೇಮಕ ಮಾಡಬೇಕು. ಒಂದು ವೇಳೆ ಒಂದು ತಾಲ್ಲೂಕಿನಲ್ಲಿ 10ಕ್ಕಿಂತ ಹೆಚ್ಚು ಕ್ಷೇತ್ರಗಳಿದ್ದರೆ, ಪ್ರತಿ 10 ಕ್ಷೇತ್ರಗಳಿಗೆ ಒಬ್ಬರಂತೆ ಸಹಾಯಕ ರಿಟರ್ನಿಂಗ್ ಅಧಿಕಾರಿಗಳನ್ನು (ಗುಂಪು ‘ಬಿ’ ಅಥವಾ ಸಮಾನ ಹುದ್ದೆಯವರನ್ನು) ನೇಮಕ ಮಾಡಬೇಕು. ಜಿಲ್ಲಾಧಿಕಾರಿಗಳು ನೇಮಕ ಮಾಡಿದ ಅಂತಹ ಪ್ರತಿಯೊಬ್ಬ ರಿಟರ್ನಿಂಗ್ ಅಧಿಕಾರಿ ಮತ್ತು ಸಹಾಯಕ ರಿಟರ್ನಿಂಗ್ ಅಧಿಕಾರಿಗಳನ್ನು ಯಾವ ಚುನಾವಣಾ ಕ್ಷೇತ್ರ ಅಥವಾ ಕ್ಷೇತ್ರಗಳಿಗೆ ನೇಮಕ ಮಾಡಲಾಗಿದೆ ಎಂಬುದನ್ನು ನಿರ್ದಿಷ್ಟಪಡಿಸಬೇಕು.
ತಾಲ್ಲೂಕು ಪಂಚಾಯತ್: ತಾಲ್ಲೂಕು ಪಂಚಾಯತಿಗೆ ಸಂಬಂಧಿಸಿದಂತೆ ಸುಮಾರು 15 ಕ್ಷೇತ್ರಗಳಿಗೆ ಒಬ್ಬರಂತೆ ತಾಲ್ಲೂಕು ತಹಶೀಲ್ದಾರರನ್ನು ಮತ್ತು ಸಮಾನ ಹುದ್ದೆಯ ಅಧಿಕಾರಿಗಳನ್ನು ಗುರುತಿಸಿ ರಿಟರ್ನಿಂಗ್ ಅಧಿಕಾರಿಯನ್ನಾಗಿ ನೇಮಕ ಮಾಡಬೇಕು. ಪ್ರತಿಯೊಬ್ಬ ರಿಟರ್ನಿಂಗ್ ಅಧಿಕಾರಿಗೆ ಸಹಾಯಕರಾಗಿ ಒಬ್ಬ ಗುಂಪು ‘ಬಿ’ ಅಥವಾ ಸಮಾನ ಹುದ್ದೆಯ ಅಧಿಕಾರಿಯನ್ನು ಸಹಾಯಕ ರಿಟರ್ನಿಂಗ್ ಅಧಿಕಾರಿಯನ್ನಾಗಿ ನೇಮಕ ಮಾಡಬೇಕು.
ವಿಶೇಷ ಸೂಚನೆಗಳು:
1. ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆಗಳಿಗೆ ರಿಟರ್ನಿಂಗ್ ಅಧಿಕಾರಿಗಳು ಮತ್ತು ಸಹಾಯಕ ರಿಟರ್ನಿಂಗ್ ಅಧಿಕಾರಿಗಳ ನೇಮಕಾತಿ ಆದೇಶವನ್ನು ಅಧಿಕಾರಿಗಳ ಪದನಾಮದ ಮೇಲೆ ನೇಮಕಾತಿ ಮಾಡುವುದು.
2. ಗುಂಪು ‘ಎ’ ವರ್ಗದ ಅಧಿಕಾರಿಗಳನ್ನು ಆಯಾ ಜಿಲ್ಲಾ ಕೇಂದ್ರಸ್ಥಾನದ ತಾಲ್ಲೂಕಿನ ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ರಿಟರ್ನಿಂಗ್ ಅಧಿಕಾರಿಗಳನ್ನಾಗಿ ಆದ್ಯತೆಯಾಗಿ ನೇಮಿಸುವುದು. ಅದೇ ರೀತಿ ತಾಲ್ಲೂಕು ತಹಶೀಲ್ದಾರರನ್ನು ಆಯಾ ತಾಲ್ಲೂಕು ಕೇಂದ್ರಸ್ಥಾನದ ತಾಲ್ಲೂಕಿನ ತಾಲ್ಲೂಕು ಪಂಚಾಯತಿ ಕ್ಷೇತ್ರಗಳಿಗೆ ರಿಟರ್ನಿಂಗ್ ಅಧಿಕಾರಿಗಳನ್ನಾಗಿ ಆದ್ಯತೆಯಾಗಿ ನೇಮಿಸುವುದು.
3. ರಿಟರ್ನಿಂಗ್ ಅಧಿಕಾರಿ ಮತ್ತು ಸಹಾಯಕ ರಿಟರ್ನಿಂಗ್ ಅಧಿಕಾರಿಗಳಾಗಿ ಗುಂಪು ‘ಎ’ ಮತ್ತು ‘ಬಿ’ ಅಧಿಕಾರಿಗಳನ್ನು ನೇಮಕ ಮಾಡುವುದರ ಜೊತೆಗೆ ಇತರ ಅಧಿಕಾರಿಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ಚುನಾವಣಾ ಕಾರ್ಯದಲ್ಲಿ ಅನುಭವ ಇರುವವರನ್ನು ಗುರುತಿಸಿ ನೇಮಕ ಮಾಡತಕ್ಕದ್ದು.
4. ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲಾಗುವುದರಿಂದ ರಿಟರ್ನಿಂಗ್ ಅಧಿಕಾರಿಗಳಿಗೆ ಮತ್ತು ಸಹಾಯಕ ರಿಟರ್ನಿಂಗ್ ಅಧಿಕಾರಿಗಳಿಗೆ ಚುನಾವಣಾ ಪ್ರಕ್ರಿಯೆ ಪ್ರಾರಂಭದಿಂದ ಮುಕ್ತಾಯದವರೆಗಿನ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಒಂದು ಸಂಪೂರ್ಣ ತರಬೇತಿಯನ್ನು ನೀಡುವುದು.
ಆಯೋಗವು ಬೇಗನೆ ಚುನಾವಣೆ ನಡೆಸಲಾಗುವುದರಿಂದ ವಿಳಂಬಕ್ಕೆ ಅವಕಾಶವಿಲ್ಲದಂತೆ ಮೇಲ್ಕಂಡ ಸೂಚನೆಗಳಂತೆ ರಿಟರ್ನಿಂಗ್ ಅಧಿಕಾರಿ ಮತ್ತು ಸಹಾಯಕ ರಿಟರ್ನಿಂಗ್ ಅಧಿಕಾರಿಗಳ ನೇಮಕಾತಿ ಪಟ್ಟಿಯ ಪ್ರಸ್ತಾವನೆಯನ್ನು ಆಯೋಗದ ಅನುಮೋದನೆಗಾಗಿ ದಿನಾಂಕ 16.11.2026ರೊಳಗೆ ತಪ್ಪದೇ ಸಲ್ಲಿಸತಕ್ಕದ್ದು ಎಂದು ಸ್ಪಷ್ಟಪಡಿಸಿದೆ. ಆಯೋಗದಿಂದ ಅನುಮೋದನೆ ಸಿಕ್ಕ ಬಳಿಕ ಅಧಿಕಾರಿಗಳನ್ನು ಆಯೋಗದ ಪೂರ್ವಾನುಮತಿ ಇಲ್ಲದೆ ಬದಲಾಯಿಸಕೂಡದು.
ಆಯೋಗದ ಅನುಮೋದನೆಯ ನಂತರ ನೇಮಕಾತಿ ಆದೇಶವನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ ಪ್ರತಿಯನ್ನು ಆಯೋಗಕ್ಕೆ, ಕಳುಹಿಸಿಕೊಡುವಂತೆ ಎಂದು ಆಯೋಗದ ಅಧೀನ ಕಾರ್ಯದರ್ಶಿ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ ಆರಂಭವಾದಂತಾಗಿದೆ.

