ಬೆಂಗಳೂರು: ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿದ ಬಾಂಗ್ಲಾದೇಶಿಯರು ಸೇರಿದಂತೆ ಎಲ್ಲಾ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ ಗಡಿಪಾರು ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ವ್ಯಾಪ್ತಿ ಕಾನೂನುಬಾಹಿರವಾಗಿ ನೆಲೆಸಲು ಯಾರಿಗೂ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ. ಇದುವರೆಗೆ ಬಾಂಗ್ಲಾದೇಶದವರು ಸೇರಿದಂತೆ 200 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಎಫ್ಐಆರ್ ಕೂಡ ದಾಖಲಾಗಿದ್ದು, ಈ ಕಾರ್ಯಚರಣೆ ಮುಂದುವರೆಸಲಾಗಿದೆ ಎಂದು ಹೇಳಿದ್ದಾರೆ.
ವೀಸಾ ಅವಧಿ ಮುಗಿದ ನಂತರ ಅಕ್ರಮವಾಗಿ ನೆಲೆಸಿದ್ದ ಮೂವರು ಆಫ್ರಿಕಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಸೆರೆಹಿಡಿದಿದ್ದಾರೆ. ನೈಜೀರಿಯಾ, ತಾಂಜೀನಿಯಾ, ಜಿಬೌಟಿ ದೇಶದ ಪ್ರಜೆಗಳಾಗಿದ್ದು, ಈ ಮೂವರನ್ನು ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿ ಅಧಿಕಾರಿಗಳ ಮುಂದೆ ಸಿಸಿಬಿ ಪೊಲೀಸರು ಹಾಜರುಪಡಿಸಿದ್ದಾರೆ. ನಂತರ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಆದೇಶದ ಮೇರೆಗೆ ವಿದೇಶಿಯರ ಪ್ರತಿಬಂಧನ ಕೇಂದ್ರಕ್ಕೆ ಅವರನ್ನು ಪೊಲೀಸರು ಕಳುಹಿಸಿದ್ದಾರೆ ಎನ್ನಲಾಗಿದೆ.

