ಬೆಂಗಳೂರು: ಹಿಂದೂ ಸಂಪ್ರದಾಯದ ಹೊಸ ವರ್ಷ ‘ಚಾಂದ್ರಮಾನ ಯುಗಾದಿ ಸಂಭ್ರಮ ಈಗ ಆರಂಭವಾಗಿದೆ. ಮನೆ-ಮನಗಳಲ್ಲಿ ಸಂಭ್ರಮದ ಸಿದ್ಧತೆ ಜೋರಾಗಿದ್ದು, ಬಾಗಿಲಿಗೆ ಮಾವಿನ ಎಲೆಯ ತೋರಣ, ಹೊಸಲಿಗೆ ಬಣ್ಣಬಣ್ಣದ ರಂಗೋಲಿ ಹಾಗೂ ದೇವರಿಗೆ ಒಬ್ಬಟ್ಟಿನ ನೈವೇದ್ಯದ ಘಮ ಮನೆತುಂಬುತ್ತಿದೆ. ಆದರೆ, ಈ ಎಲ್ಲ ಸಂಭ್ರಮಗಳ ನಡುವೆ ಯುಗಾದಿಯ ಪ್ರಮುಖ ಆಕರ್ಷಣೆ ಎಂದರೆ ಅದು ‘ಯುಗಾದಿ ಪಚಡಿ’.
ಬೇಸಿಗೆಗೆ ಹೇಳಿ ಮಾಡಿಸಿದ ಪಚಡಿ:
ಬಲಿತ ಬೇಸಿಗೆಯಲ್ಲೇ ಬರುವ ಈ ಹಬ್ಬವು ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದು. ಯುಗಾದಿಯ ಅವಿಭಾಜ್ಯ ಅಂಗವಾಗಿರುವ ಈ ಪಚಡಿಯ ಬಗ್ಗೆ ಇಂದಿನ ತಲೆಮಾರಿಗೆ ಪೂರ್ಣ ಅರಿವಿಲ್ಲದಿರಬಹುದು. ಹುಣಸೆ ಹಣ್ಣು, ಬೆಲ್ಲ, ಬೇವು, ಮೆಣಸಿನಕಾಯಿ, ಮಾವಿನಕಾಯಿ ಮತ್ತು ಉಪ್ಪು – ಈ ಆರು ರುಚಿಗಳ ಸಮ್ಮಿಲನವೇ ಪಚಡಿ. ವಿಶೇಷವೆಂದರೆ, ಬೇಸಿಗೆಯಲ್ಲಿ ಸುಲಭವಾಗಿ ಲಭ್ಯವಿರುವ ಈ ತಾಜಾ ಪದಾರ್ಥಗಳು ದೇಹದ ಮೇಲೆ ಅದ್ಭುತ ಪರಿಣಾಮ ಬೀರುತ್ತವೆ.
ಆರೋಗ್ಯ ಮತ್ತು ಜೀವನದ ಪಾಠ:
ಈ ಪಚಡಿ ಕೇವಲ ಒಂದು ಖಾದ್ಯವಲ್ಲ, ಇದು ಜೀವನದ ಸಾರ. ಜೀವನದಲ್ಲಿ ಬರುವ ಕಹಿ, ಸಿಹಿ, ಹುಳಿ, ಖಾರ, ಒಗರು ಮತ್ತು ಉಪ್ಪನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶ ಇದರಲ್ಲಿದೆ. ಇದರೊಂದಿಗೆ ಬೇಸಿಗೆಯ ದಣಿವನ್ನು ಆರಿಸಿ ದೇಹಕ್ಕೆ ತಂಪನ್ನೀಯುವ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ವೈಜ್ಞಾನಿಕ ಹಿನ್ನೆಲೆಯೂ ಈ ಸಾಂಪ್ರದಾಯಿಕ ರೆಸಿಪಿಯ ಹಿಂದಿದೆ.
ಯುಗಾದಿ ಪಚಡಿಗೆ ಬೇಕಾಗುವ ಸಾಮಾಗ್ರಿಗಳು
ಹುಣಸೆ ಹಣ್ಣು,
ಬೆಲ್ಲ,
ಬೇವು,
ಮೆಣಸಿನಕಾಯಿ,
ಮಾವಿನಕಾಯಿ
ಉಪ್ಪು
ಯುಗಾದಿ ಪಚಡಿ ತಯಾರಿಸುವ ವಿಧಾನ:
ಹುಣಸೆ ಹಣ್ಣಿನ ತಿರುಳು ಮತ್ತು ಬೆಲ್ಲವನ್ನು ಒಂದು ಬಟ್ಟಲಿನಲ್ಲಿ ಹಾಕಿ, ಬೆಲ್ಲ ಸಂಪೂರ್ಣವಾಗಿ ಕರಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
ಕತ್ತರಿಸಿದ ಮಾವಿನಕಾಯಿ, ಬೇವಿನ ಹೂವು, ಕರಿಮೆಣಸು, ಮತ್ತು ಉಪ್ಪು ಸೇರಿಸಿ.
ಈ ಎಲ್ಲವನ್ನು ಚೆನ್ನಾಗಿ ಬೆರೆಸಿ, ಸ್ವಲ್ಪ ನೀರು ಸೇರಿಸಿ.
5-10 ನಿಮಿಷಗಳ ನಂತರ, ಸಿಹಿ-ಕಹಿ-ಖಾರ-ಹುಳಿ-ಉಪ್ಪು ಆರು ರುಚಿಗಳ ಸಮತೋಲನದೊಂದಿಗೆ ಯುಗಾದಿ ಪಚಡಿ ರೆಡಿ!
ಸುಲಭ, ಆರೋಗ್ಯಕರ, ಮತ್ತು ಪರಂಪರೆಯ ರುಚಿ ಉಟ್ಟ ಯುಗಾದಿ ಪಚಡಿ ತಯಾರಿಸಿ, ಹೊಸ ವರ್ಷವನ್ನು ಹರ್ಷೋಲ್ಲಾಸದಿಂದ ಆಚರಿಸಿ

