ಬೆಂಗಳೂರು : ಬೆಂಗಳೂರಿನ ‘ನಮ್ಮ ಮೆಟ್ರೋ’ ರೈಲಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ನಡೆದುಕೊಳ್ಳಬಾರದು ಎಂಬ ಕಟ್ಟುನಿಟ್ಟಿನ ನಿಯಮಗಳಿದ್ದರೂ, ಇತ್ತೀಚೆಗೆ ಯುವತಿಯರ ಗುಂಪೊಂದು ಮೆಟ್ರೋ ಕೋಚ್ ಒಳಗೆ ಗಟ್ಟಿಯಾಗಿ ಹಾಡು ಹಾಡುತ್ತಾ ರೀಲ್ಸ್ ಮಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮೆಟ್ರೋ ಒಳಗೆ ಲೌಡ್ ಸ್ಪೀಕರ್ ಬಳಸುವುದು ಅಥವಾ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವಂತೆ ಕೂಗಾಡುವುದು ಮತ್ತು ಹಾಡುವುದು ನಿಷೇಧಿಸಲಾಗಿದೆ. ಆದರೆ ಈ ಯುವತಿಯರು ಸಿನಿಮೀಯ ಶೈಲಿಯಲ್ಲಿ ಗುಂಪಾಗಿ ಹಾಡುತ್ತಾ ಸಂಭ್ರಮಿಸಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಮೆಟ್ರೋ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿದೆ.
ಪ್ರಯಾಣಿಕರ ಆಕ್ಷೇಪ: ಮೆಟ್ರೋದಲ್ಲಿ ಶಾಂತಿಯುತವಾಗಿ ಪ್ರಯಾಣಿಸಲು ಬಯಸುವ ಸಾರ್ವಜನಿಕರು ಈ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಿಎಂಆರ್ಸಿಎಲ್ (BMRCL) ಪ್ರತಿಕ್ರಿಯೆ: ಈ ವೀಡಿಯೊ ಗಮನಕ್ಕೆ ಬರುತ್ತಿದ್ದಂತೆಯೇ ಬೆಂಗಳೂರು ಮೆಟ್ರೋ ರೈಲು ನಿಗಮವು ತನಿಖೆಗೆ ಮುಂದಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಯುವತಿಯರನ್ನು ಗುರುತಿಸಿ, ದಂಡ ವಿಧಿಸಲು ಅಥವಾ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.ಮೆಟ್ರೋ ಆವರಣದಲ್ಲಿ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ಮೇಲೆ ನಿರ್ಬಂಧಗಳಿವೆ. ನಿಯಮ ಮೀರಿದರೆ ಜೈಲು ಶಿಕ್ಷೆ ಅಥವಾ ಭಾರಿ ಮೊತ್ತದ ದಂಡ ವಿಧಿಸಲು ಅವಕಾಶವಿದೆ ಎಂದು ಬಿಎಂಆರ್ಸಿಎಲ್ ನೆನಪಿಸಿದೆ.
ರೂಪೇಶ್ ರಾಜಣ್ಣ ಟ್ವೀಟ್.!
ಮತ್ತೊಂದು ವಿಡಿಯೋ ಬೆಂಗಳೂರನ್ನು ಭೀಮಾರು ಅಂದುಕೊಂಡಿರೋ ಈ ಅನಾಗಕರಿಗೆ ಹೇಳೋರು ಕೇಳೋರು ಯಾರು ಇಲ್ವಾ @OfficialBMRCLಇದಕ್ಕೆ ಕೂಡಲೇ ಕ್ರಮ ಆಗಲೇಬೇಕು. ಇಂತಹ ಡ್ರಾಮಾನಾ ಅವರ ಊರಲ್ಲಿ ಇಟ್ಟುಕೊಳ್ಳಲಿ. ಮೆಟ್ರೋ ಅಧಿಕಾರಿಗಳು ಇದಕ್ಕೆ ಬೆಂಬಲ ಆಗಿದ್ದೀರಾ? ಇದು ಕರ್ನಾಟಕ. @BlrCityPolice ತಮ್ಮ ಗಮನಕ್ಕೆ ಎಂದು ರೂಪೇಶ್ ರಾಜಣ್ಣ ಟ್ವೀಟ್ ಮಾಡಿದ್ದಾರೆ.

