ನವದೆಹಲಿ: ಭವಿಷ್ಯನಿಧಿ ಮಾಸಿಕ ಪಿಂಚಣಿ ಮೊತ್ತ ಹೆಚ್ಚಳಕ್ಕೆ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ. ಸದ್ಯ ಒಂದು ಸಾವಿರ ರೂಪಾಯಿ ಇರುವ ಭವಿಷ್ಯ ನಿಧಿ ಪಿಂಚಣಿದಾರರ ಕನಿಷ್ಠ ಮಾಸಿಕ ಪಿಂಚಣಿಯನ್ನು ತುರ್ತಾಗಿ ಹೆಚ್ಚಳ ಮಾಡಬೇಕು ಎಂದು ಹೇಳಲಾಗಿದೆ.
ಈಗಿರುವ ಮೊತ್ತ ವಾಸ್ತವಕ್ಕೆ ದೂರವಾಗಿದ್ದು, ಇದನ್ನು ತುರ್ತಾಗಿ ಮರುಪರಿಶೀಲಿಸಬೇಕು ಎಂದು ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿದೆ. ಇಪಿಎಸ್-95 ರ ಅಡಿಯಲ್ಲಿ ಕನಿಷ್ಠ ಪಿಂಚಣಿ ಮೊತ್ತವನ್ನು 7500 ರೂ.ಗೆ ಹೆಚ್ಚಳ ಮಾಡಬೇಕೆಂದು ಕಾರ್ಮಿಕ ಸಂಘಟನೆಗಳು ಅನೇಕ ವರ್ಷಗಳಿಂದ ಒತ್ತಾಯಿಸುತ್ತಿವೆ. ಇಂದಿನ ಜೀವನ ವೆಚ್ಚಕ್ಕೆ ಅನುಗುಣವಾದ ಕನಿಷ್ಠ ಪಿಂಚಣಿ ದೊರೆಯುವಂತೆ ಮಾಡಲು ಇಪಿಎಸ್ -95 ರ ಯೋಜನೆಗೆ ಕೇಂದ್ರ ಬಜೆಟ್ ಮೂಲಕ ನೆರವು ಒದಗಿಸುವುದು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು ಎಂದು ಕಾರ್ಮಿಕರು, ಜವಳಿ ಮತ್ತು ಕೌಶಲ ಅಭಿವೃದ್ಧಿ ಕುರಿತ ಸಂಸತ್ತಿನ ಸ್ಥಾಯಿ ಸಮಿತಿ ವರದಿಯಲ್ಲಿ ಶಿಫಾರಸು ಮಾಡಿದೆ.

