HomeLatest Newsಆಫರ್ ಲೆಟರ್‌ನ ಸಂಬಳಕ್ಕೂ ಕೈಗೆ ಸಿಗುವ ಸಂಬಳಕ್ಕೂ ವ್ಯತ್ಯಾಸ ಯಾಕೆ? ಇಲ್ಲಿದೆ ಲೆಕ್ಕ

ಆಫರ್ ಲೆಟರ್‌ನ ಸಂಬಳಕ್ಕೂ ಕೈಗೆ ಸಿಗುವ ಸಂಬಳಕ್ಕೂ ವ್ಯತ್ಯಾಸ ಯಾಕೆ? ಇಲ್ಲಿದೆ ಲೆಕ್ಕ

ಹೊಸ ಉದ್ಯೋಗ ಸಿಕ್ಕಾಗ ಅಥವಾ ಪ್ರಮೋಷನ್ ಆದಾಗ ಸಿಗುವ ಆಫರ್ ಲೆಟರ್ ನೋಡಿ ಪ್ರತಿಯೊಬ್ಬರೂ ಖುಷಿಪಡುತ್ತಾರೆ. ಅದಕ್ಕೆ ಮುಖ್ಯ ಕಾರಣ ಆಫರ್ ಲೆಟರ್‌ನಲ್ಲಿ ಎದ್ದು ಕಾಣುವ ಆ ದೊಡ್ಡ ಮೊತ್ತದ ಸಂಬಳ ಆದರೆ, ಆಫರ್ ಲೆಟರ್‌ನಲ್ಲಿ ನಮೂದಾಗಿರುವ ಪೂರ್ಣ ಮೊತ್ತ ನಿಮ್ಮ ಬ್ಯಾಂಕ್ ಅಕೌಂಟಿಗೆ ನೇರವಾಗಿ ಜಮೆಯಾಗುವುದಿಲ್ಲ ಎನ್ನುವುದು ಬಹುತೇಕರಿಗೆ ಗೊತ್ತಿರಲ್ಲ. ಆಫರ್ ಲೆಟರ್‌ನಲ್ಲಿ ಕಾಣುವ ‘ಗ್ರೋಸ್ ಸ್ಯಾಲರಿ’ ಬೇರೆ, ನಿಮ್ಮ ಕೈಗೆ ಸಿಗುವ ನೆಟ್ ಸ್ಯಾಲರಿ ಬೇರೆ. ಈ ಎರಡರ ನಡುವಿನ ವ್ಯತ್ಯಾಸವೇನು? ನಿಮ್ಮ ಹಣ ಎಲ್ಲಿಗೆ ಹೋಗುತ್ತದೆ? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಗ್ರೋಸ್ ಸ್ಯಾಲರಿ ಎಂದರೇನು?

ಆಫರ್ ಲೆಟರ್‌ನಲ್ಲಿ ಕಂಪನಿಯು ನಿಮಗೆ ನೀಡಲು ಒಪ್ಪಿಕೊಂಡಿರುವ ಒಟ್ಟು ಮೊತ್ತವೇ ಗ್ರೋಸ್ ಸ್ಯಾಲರಿ. ಯಾವುದೇ ರೀತಿಯ ತೆರಿಗೆ ಅಥವಾ ಇತರ ಕಡಿತಗಳನ್ನು ಮಾಡುವ ಮುನ್ನ ಲೆಕ್ಕ ಹಾಕಲಾಗುವ ಒಟ್ಟು ಸಂಬಳ ಇದಾಗಿರುತ್ತದೆ. ನಿಮ್ಮ ಕೆಲಸದ ಒಟ್ಟು ಮೌಲ್ಯವನ್ನು ತಿಳಿಯಲು ಮತ್ತು ಬೇರೆ ಬೇರೆ ಕಂಪನಿಗಳ ಆಫರ್‌ಗಳನ್ನು ಹೋಲಿಕೆ ಮಾಡಲು ಗ್ರೋಸ್ ಸ್ಯಾಲರಿ ಉಪಯುಕ್ತ.

ಗ್ರೋಸ್ ಸ್ಯಾಲರಿಯಲ್ಲಿ ಏನೇನಿರುತ್ತದೆ?

ಮೂಲ ವೇತನ (Basic Salary): ಇದು ನಿಮ್ಮ ಸಂಬಳದ ಪ್ರಮುಖ ಹಾಗೂ ಸ್ಥಿರ ಭಾಗ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭತ್ಯೆಗಳು (Allowances): ಮನೆ ಬಾಡಿಗೆ ಭತ್ಯೆ (HRA), ಪ್ರಯಾಣ ಭತ್ಯೆ (TA), ವೈದ್ಯಕೀಯ ಭತ್ಯೆಗಳು ಮತ್ತು ಹಬ್ಬದ ಬೋನಸ್‌ಗಳು.

ಇನ್ಸೆಂಟಿವ್ಸ್ ಮತ್ತು ಓವರ್‌ಟೈಮ್: ಕಂಪನಿಯ ಗುರಿ ತಲುಪಿದಾಗ ಅಥವಾ ಹೆಚ್ಚುವರಿ ಸಮಯ ಕೆಲಸ ಮಾಡಿದಾಗ ಸಿಗುವ ಪ್ರೋತ್ಸಾಹಧನ.

ನೆಟ್ ಸ್ಯಾಲರಿ (ಟೇಕ್ ಹೋಮ್ ಸ್ಯಾಲರಿ) ಎಂದರೇನು?

ನಿಮ್ಮ ಒಟ್ಟು ಗ್ರೋಸ್ ಸ್ಯಾಲರಿಯಿಂದ ಸರ್ಕಾರಿ ನಿಯಮಾವಳಿಗಳು ಹಾಗೂ ಕಂಪನಿಯ ನಿಯಮಗಳ ಪ್ರಕಾರ ಎಲ್ಲಾ ಕಡ್ಡಾಯ ಕಡಿತಗಳನ್ನು ಮಾಡಿದ ನಂತರ ಅಂತಿಮವಾಗಿ ನಿಮ್ಮ ಕೈಗೆ ಸಿಗುವ ಸಂಬಳವೇ ನೆಟ್ ಸ್ಯಾಲರಿ. ಇದನ್ನು ‘ಟೇಕ್-ಹೋಮ್ ಸ್ಯಾಲರಿ’ ಎಂದೂ ಕರೆಯುತ್ತಾರೆ. ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುವ ನಿಖರವಾದ ಹಣದ ಮೊತ್ತ ಇದಾಗಿದ್ದು, ನಿಮ್ಮ ಮಾಸಿಕ ಖರ್ಚು ಮತ್ತು ಬಜೆಟ್ ನಿರ್ವಹಣೆಗೆ ಇದೇ ಆಧಾರ.

ಸಂಬಳದಿಂದ ಕಡಿತವಾಗುವ ಪ್ರಮುಖ ಅಂಶಗಳು:

ಪ್ರಾವಿಡೆಂಟ್ ಫಂಡ್ (EPF): ನಿಮ್ಮ ಮೂಲ ವೇತನದ ಆಧಾರದ ಮೇಲೆ ಭವಿಷ್ಯ ನಿಧಿಗಾಗಿ ಕಡಿತಗೊಳಿಸುವ ಮೊತ್ತ.

ಆದಾಯ ತೆರಿಗೆ (TDS/Income Tax): ನಿಮ್ಮ ಒಟ್ಟು ಆದಾಯದ ಮಿತಿಗೆ ಅನುಗುಣವಾಗಿ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ.

ವೃತ್ತಿಪರ ತೆರಿಗೆ (Professional Tax): ರಾಜ್ಯ ಸರ್ಕಾರದ ನಿಯಮಾವಳಿಗಳ ಪ್ರಕಾರ ಕಟಾವಾಗುವ ತೆರಿಗೆ.

ಆರೋಗ್ಯ ವಿಮೆ (Insurance): ಕಂಪನಿಯು ಒದಗಿಸುವ ಆರೋಗ್ಯ ವಿಮೆಯ ಪ್ರೀಮಿಯಂ ಮೊತ್ತ.

ನೆಟ್ ಸ್ಯಾಲರಿ ಲೆಕ್ಕಹಾಕುವುದು ಹೇಗೆ? (ಉದಾಹರಣೆಯೊಂದಿಗೆ):

ಉದಾಹರಣೆಗೆ, ನಿಮಗೆ ತಿಂಗಳಿಗೆ ₹50,000 ಗ್ರೋಸ್ ಸ್ಯಾಲರಿ ಇರುವ ಆಫರ್ ಲೆಟರ್ ಸಿಕ್ಕಿದೆ ಎಂದು ಭಾವಿಸೋಣ:

ಒಟ್ಟು ಗ್ರೋಸ್ ಸ್ಯಾಲರಿ: ₹50,000

ಅಂದಾಜು ಕಡಿತಗಳು :

PF : ₹1,800

ವೃತ್ತಿಪರ ತೆರಿಗೆ : ₹200

ಆದಾಯ ತೆರಿಗೆ (TDS): ₹1,000

ಆರೋಗ್ಯ ವಿಮೆ (Insurance): ₹500

ಒಟ್ಟು ಕಡಿತಗಳು: ₹3,500

ಲೆಕ್ಕಾಚಾರ:

ನೆಟ್ ಸ್ಯಾಲರಿ = ಗ್ರೋಸ್ ಸ್ಯಾಲರಿ – ಒಟ್ಟು ಕಡಿತಗಳು

₹50,000 – ₹3,500 = ₹46,500

ಅಂದರೆ, ಆಫರ್ ಲೆಟರ್‌ನಲ್ಲಿ ₹50,000 ಎಂದಿದ್ದರೂ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುವುದು ₹46,500 ಮಾತ್ರ.

ಇನ್ನೊಂದು ಉದಾಹರಣೆಯಲ್ಲಿ, ಗ್ರೋಸ್ ಸ್ಯಾಲರಿ ₹70,000 ಇದ್ದು, ತೆರಿಗೆ ₹5,000, ಇಪಿಎಫ್ ₹3,500 ಹಾಗೂ ವಿಮೆ ₹3,500 ಸೇರಿ ಒಟ್ಟು ₹12,000 ಕಡಿತಗೊಂಡರೆ, ಕೈಗೆ ಸಿಗುವ ನೆಟ್ ಸ್ಯಾಲರಿ ₹58,000 ಆಗಿರುತ್ತದೆ.

ಆಫರ್ ಲೆಟರ್ ಎನ್ನುವುದು ನಿಮ್ಮ ಉದ್ಯೋಗದ ಪೂರ್ಣ ಮೌಲ್ಯವನ್ನು ತೋರಿಸಿದರೆ, ನೆಟ್ ಸ್ಯಾಲರಿಯು ನೀವು ದಿನನಿತ್ಯದ ಖರ್ಚಿಗೆ ಬಳಸಬಹುದಾದ ನೈಜ ಹಣವಾಗಿರುತ್ತದೆ. ಹೊಸ ಉದ್ಯೋಗ ಸೇರುವ ಮುನ್ನವೇ ಈ ಲೆಕ್ಕಾಚಾರ ತಿಳಿದುಕೊಂಡರೆ ಹಣಕಾಸಿನ ಯೋಜನೆ ರೂಪಿಸುವುದು ಸುಲಭವಾಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular