ಬೆಂಗಳೂರು: ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ನಿಲುಗಡೆ ಮಾಡಿರುವ ವಾಹನಗಳ ಮಾಲೀಕರು ತೆರವು ಮಾಡದಿದ್ದರೆ ಅಂತಹ ವಾಹನಗಳನ್ನು ವಶಕ್ಕೆ ಪಡೆದು ಹರಾಜು ಹಾಕಲಾಗುವುದು ಎಂದು ಜಿಬಿಎ ಎಚ್ಚರಿಕೆ ನೀಡಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರ ಸೂಚನೆಯಂತೆ ವಾಹನಗಳ ತೆರವು ಅಭಿಯಾನ ಆರಂಭಿಸಲಾಗಿದೆ. ಇಂತಹ ವಾಹನಗಳಿಗೆ ನೋಟಿಸ್ ಅಂಟಿಸಿ ಎಚ್ಚರಿಕೆ ನೀಡಲಾಗಿದ್ದರೂ ಕೆಲವರು ಇನ್ನೂ ವಾಹನಗಳನ್ನು ಬಿಡಿಸಿಕೊಳ್ಳುವುದಾಗಲಿ, ವಾಹನಗಳ ಮಾಲೀಕತ್ವ ತಿಳಿಸುವುದಾಗಲಿ ಮಾಡಿಲ್ಲ. ನೋಟಿಸ್ ನೀಡಿದ 15 ದಿನಗಳ ನಂತರ ವಾಹನ ಮಾಲೀಕರು ಬರದಿದ್ದಲ್ಲಿ ಅವುಗಳನ್ನು ಹರಾಜು ಹಾಕಲಾಗುವುದು ಎಂದು ಜಿಬಿಎ ಎಚ್ಚರಿಕೆ ನೀಡಿದೆ.
ಒಟ್ಟು 6544 ವಾಹನಗಳನ್ನು ನಗರದಲ್ಲಿ ಗುರುತಿಸಲಾಗಿದ್ದು, ಇವುಗಳ ಪೈಕಿ ಸಾರ್ವಜನಿಕರೇ ಸುಮಾರು 4108 ವಾಹನಗಳ ಮಾಹಿತಿ ನೀಡಿದ್ದಾರೆ. ಪೊಲೀಸರು 2436 ವಾಹನಗಳ ವರದಿ ನೀಡಿದ್ದಾರೆ. ಈಗಾಗಲೇ ಅಧಿಕಾರಿಗಳು 1780 ವಾಹನಗಳಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ಅಂಟಿಸಿದ ಏಳು ದಿನಗಳ ಒಳಗೆ ಅಂತಹ ವಾಹನಗಳನ್ನು ಮಾಲೀಕರೇ ತಮ್ಮ ಜಾಗದಲ್ಲಿ ನಿಲುಗಡೆ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ವಾಹನಗಳ ಟೋಯಿಂಗ್ ಮಾಡಲಾಗುವುದು. ಈ ಸಮಯದಲ್ಲಿ ವಾಹನಗಳ ಮಾಲೀಕರು 600 ನೋ ಪಾರ್ಕಿಂಗ್ ಶುಲ್ಕ ದಂಡ ಮತ್ತು 1000 ಟೋಯಿಂಗ್ ಶುಲ್ಕ ಪಾವತಿಸಿ ವಾಹನ ಬೆಳೆಸಿಕೊಳ್ಳಲು ಅವಕಾಶವಿದೆ. ಇದಾದ ನಂತರವೂ ವಾಹನ ಬಿಡಿಸಿಕೊಳ್ಳದಿದ್ದರೆ ಅಂತಹ ವಾಹನಗಳನ್ನು ಹರಾಜು ಹಾಕಲಾಗುವುದು ಎಂದು ಹೇಳಲಾಗಿದೆ.

