ಬೆಂಗಳೂರು: ಭಾರತದ ಲಘು ಯುದ್ಧ ವಿಮಾನ (LCA) ಎಂಕೆ-2 ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ADA) ಸಂಸ್ಥೆಯ 47 ವರ್ಷದ ಹಿರಿಯ ವಿಜ್ಞಾನಿ ಶರದ್ ಕಟಿಯಾರ್ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕೆಲಸದ ಒತ್ತಡ ಮತ್ತು ಮಾನಸಿಕ ಒತ್ತಡ ಕಾರಣವಾಗಿರಬಹುದು ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಶರದ್ ಕಟಿಯಾರ್ ಅವರು ಎಡಿಎ ಸಂಸ್ಥೆಯ ಪ್ರೋಗ್ರಾಮಿಂಗ್ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೆಂಗಳೂರಿನ ಸೀಗೆಹಳ್ಳಿ ಪ್ರದೇಶದ ವಸತಿ ಸಮುಚ್ಚಯದ ನಾಲ್ಕನೇ ಮಹಡಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು.
ಅಕ್ಟೋಬರ್ 21ರಂದು ಅವರು ವಸತಿ ಕಟ್ಟಡದಿಂದ ಕೆಳಗೆ ಬಿದ್ದಿದ್ದರು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ವರದಿಯಾಗಿದೆ.
https://x.com/path2shah/status/2114967900029325313?s=20
ಒಂದು ತಿಂಗಳಿನಿಂದ ಕೆಲಸದ ಒತ್ತಡವಿತ್ತು ಎಂದ ಕುಟುಂಬ
ಶರದ್ ಕಟಿಯಾರ್ ಅವರು ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ತೀವ್ರ ಕೆಲಸದ ಒತ್ತಡ ಎದುರಿಸುತ್ತಿದ್ದರು ಎಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದ ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿತ್ತು ಎಂಬುದು ಕುಟುಂಬದ ಆರೋಪವಾಗಿದೆ.
ಅವರು ಖಾಸಗಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರು. ಅಲ್ಲಿ ಖಿನ್ನತೆಯ ಲಕ್ಷಣಗಳು ಕಂಡುಬಂದಿದ್ದವು ಎಂದು ಕುಟುಂಬದವರು ತಿಳಿಸಿದ್ದಾರೆ. ಅಕ್ಟೋಬರ್ 21ರಂದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS)ಗೆ ತೆರಳಿ ಮನೋವೈದ್ಯಕೀಯ ಸಲಹೆ ಪಡೆದಿದ್ದ ಶರದ್ ಅವರಿಗೆ ಔಷಧಿಗಳನ್ನೂ ಸೂಚಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೆಲಸದ ಒತ್ತಡದ ಬಗ್ಗೆ ಮಾಹಿತಿ ಇರಲಿಲ್ಲ ಎಂದ ಎಡಿಎ
ಶರದ್ ಅವರ ಕೆಲಸದ ಒತ್ತಡದ ಬಗ್ಗೆ ಸಂಸ್ಥೆಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಎಡಿಎಯ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಕೃಷ್ಣ ರಾಜೇಂದ್ರ ತಿಳಿಸಿದ್ದಾರೆ.
“ನಮಗೆ ಇಂತಹ ಯಾವುದೇ ಸಮಸ್ಯೆಯ ಬಗ್ಗೆ ಮಾಹಿತಿ ಇರಲಿಲ್ಲ. ಅವರ ಕೆಲವು ಸಹೋದ್ಯೋಗಿಗಳೊಂದಿಗೆ ಮಾತನಾಡಿದ್ದೇನೆ. ಅವರಿಗೂ ಈ ಬಗ್ಗೆ ತಿಳಿದಿರಲಿಲ್ಲ,” ಎಂದು ಅವರು ಹೇಳಿದ್ದಾರೆ.
ಉದ್ಯೋಗಿಗಳ ಮಾನಸಿಕ ಒತ್ತಡ ನಿರ್ವಹಣೆಗಾಗಿ ಸಂಸ್ಥೆಯು ಹಲವು ಕಾರ್ಯಕ್ರಮಗಳನ್ನು ನಡೆಸಿದೆ ಎಂದೂ ಅವರು ತಿಳಿಸಿದ್ದಾರೆ.
ಕೆಲಸದ ಒತ್ತಡವೇ ಸಾವಿಗೆ ಕಾರಣವೇ?
ಶರದ್ ಅವರ ಸಾವಿಗೆ ಕೆಲಸದ ಒತ್ತಡವೇ ನೇರ ಕಾರಣ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂಬುದು ಸಂಸ್ಥೆಯ ಪ್ರತಿಕ್ರಿಯೆಯ ಸಾರವಾಗಿದೆ. ಉದ್ಯೋಗಿಗಳಿಗೆ ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಒತ್ತಡವಿದ್ದರೂ, ದೀರ್ಘಕಾಲ ಕೆಲಸ ಮಾಡಬೇಕೆಂಬ ನಿರೀಕ್ಷೆ ಸಂಸ್ಥೆಯಲ್ಲಿಲ್ಲ ಎಂದು ಕೃಷ್ಣ ರಾಜೇಂದ್ರ ಹೇಳಿದ್ದಾರೆ.
ಸಾಮಾನ್ಯವಾಗಿ ಉದ್ಯೋಗಿಗಳು ಬೆಳಗ್ಗೆ 8.30ರಿಂದ ಸಂಜೆ 6 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಶರದ್ ಅವರ ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿಗಳನ್ನೂ ಪರಿಶೀಲಿಸಿದ್ದು, ಅಂತಹ ಅರ್ಜಿ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ವೈಯಕ್ತಿಕ ಅಥವಾ ವೃತ್ತಿಪರ ಸಮಸ್ಯೆಗಳನ್ನು ಎದುರಿಸುವ ಉದ್ಯೋಗಿಗಳು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದೂ ಹೇಳಿದ್ದಾರೆ.
ಪೊಲೀಸರಿಂದ ತನಿಖೆ
ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಸೆಕ್ಷನ್ 194ರ ಅಡಿಯಲ್ಲಿ ಅಸ್ವಾಭಾವಿಕ ಸಾವು ವರದಿ ದಾಖಲಿಸಿಕೊಂಡಿದ್ದಾರೆ. ಶರದ್ ಅವರ ಪತ್ನಿ ಮತ್ತು ಪೋಷಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.
ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಕುಟುಂಬದ ಆರೋಪಗಳು ಮತ್ತು ಸಂಸ್ಥೆಯ ಪ್ರತಿಕ್ರಿಯೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

