ಬೆಂಗಳೂರು: ದೇಶದ ಆಂತರಿಕ ಭದ್ರತೆಗೆ ಸರ್ವಸನ್ನದ್ದವಾಗಿರುವ ಒಂದು ಪಡೆಯ ಅಗತ್ಯವನ್ನು ಮನಗಂಡು 1984ರಲ್ಲಿ ಪ್ರಾರಂಭಿಸಲಾದ NSGಗೆ 1986ರಲ್ಲಿ ಪ್ರತ್ಯೇಕ ಕಾಯ್ದೆಯನ್ನು ರೂಪಿಸಲಾಯಿತು.
ವಿಶೇಷ ತರಬೇತಿ ಮತ್ತು ಸಾಮರ್ಥ್ಯವನ್ನು ಅಳವಡಿಸಿಕೊಂಡಿರುವ NSG ಪಡೆಯಿಂದ ಕರ್ನಾಟಕದ ಪೊಲೀಸ್ ಇಲಾಖೆಗೂ ತರಬೇತಿ ನೀಡುವಂತಹ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದೇಶದ ಅತ್ಯುನ್ನತ ಮತ್ತು ಶ್ರೇಷ್ಠ ಭದ್ರತಾ ಸಂಸ್ಥೆಯಾದ ರಾಷ್ಟ್ರೀಯ ಭದ್ರತಾ ಪಡೆ(NSG) ಯ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಪೊಲೀಸ್ ಪಡೆಗಾಗಿ ಆಯೋಜಿಸಲಾಗಿರುವ ‘ಸಮಗ್ರ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮ’ಕ್ಕೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೊಂದಿಗೆ ನಗರದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಬದಲಾಗುತ್ತಿರುವ ಆಧುನಿಕ ಕಾಲದಲ್ಲಿ ಅಪರಾಧಗಳ ಸ್ವರೂಪವೂ ವೇಗವಾಗಿ ಬದಲಾಗುತ್ತಿದೆ. ಸಾಂಪ್ರದಾಯಿಕ ಸವಾಲುಗಳ ಜೊತೆಗೆ ಸೈಬರ್ ಅಪರಾಧ, ಆನ್‌ಲೈನ್ ವಂಚನೆ, ಡಿಜಿಟಲ್ ಮೂಲಭೂತವಾದ, ಡ್ರೋನ್ ದುರುಪಯೋಗ ಹಾಗೂ ಸಂಘಟಿತ ಅಪರಾಧಗಳಂತಹ ಹೊಸ ಭದ್ರತಾ ಸವಾಲುಗಳು ಎದುರಾಗುತ್ತಿವೆ. ಇವುಗಳಿಗೆ ಹಳೆಯ ವಿಧಾನಗಳಿಂದ ಉತ್ತರ ನೀಡಲು ಸಾಧ್ಯವಿಲ್ಲ. ಹೊಸ ಜ್ಞಾನ, ಆಧುನಿಕ ತಂತ್ರಜ್ಞಾನ ಹಾಗೂ ಕಠಿಣ ತರಬೇತಿಯ ಮೂಲಕ ನಮ್ಮ ಪೊಲೀಸ್ ಇಲಾಖೆಯನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.
NSGಯ ವೇಗ, ವೃತ್ತಿಪರತೆ, ಗೋಪ್ಯತೆ ಹಾಗೂ ನಿಖರತೆಯಂತಹ ಕಾರ್ಯಾಚರಣಾ ಗುಣಗಳನ್ನು ನಮ್ಮ ಪೊಲೀಸರು ಅಳವಡಿಸಿಕೊಂಡು ರಾಜ್ಯವನ್ನು ಸುರಕ್ಷಿತ ತಾಣವನ್ನಾಗಿಸಲು ಶ್ರಮಿಸಲಿದ್ದಾರೆ.
ಭಯೋತ್ಪಾದನೆಯಂತಹ ದೊಡ್ಡ ಭದ್ರತಾ ಸವಾಲುಗಳನ್ನು ಎದುರಿಸಲು ಗುಪ್ತಚರ, ವಿಶೇಷ ಪಡೆಗಳು, ಫೋರೆನ್ಸಿಕ್, ಅಗ್ನಿಶಾಮಕ ಹಾಗೂ ನಾಗರಿಕ ಆಡಳಿತದಂತಹ ಎಲ್ಲ ವಿಭಾಗಗಳ ನಡುವೆ ಸಮನ್ವಯತೆ, ಸಂವಹನ ಮತ್ತು ಸಹಕಾರ ಅತ್ಯಗತ್ಯ. ರಾಜ್ಯ ಪೊಲೀಸ್ ಇಲಾಖೆಯ ಫೋರೆನ್ಸಿಕ್ ಸಾಮರ್ಥ್ಯ, ಸೈಬರ್ ತನಿಖೆ, ಡೇಟಾ ಆಧಾರಿತ ಪೊಲೀಸಿಂಗ್ ಮತ್ತು ತ್ವರಿತ ಪ್ರತಿಕ್ರಿಯೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.
ನಮ್ಮ ಪೊಲೀಸರು ಕೇವಲ ಅತ್ಯುತ್ತಮ ಯೋಧರಷ್ಟೇ ಅಲ್ಲದೆ, ಅತ್ಯುತ್ತಮ ಸಾರ್ವಜನಿಕ ಸೇವಕರಾಗಿಯೂ ಕಾರ್ಯಾಚರಿಸಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನಂಬಿಕೆಯನ್ನು ಗಟ್ಟಿಗೊಳಿಸುವುದು ನಮ್ಮ ಗುರಿ.
ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ, ರಾಜ್ಯದ ಆಂತರಿಕ ಭದ್ರತೆಯನ್ನು ಬಲಪಡಿಸಲು ಮತ್ತು ಪೊಲೀಸ್ ಇಲಾಖೆಯನ್ನು ಸಂಪೂರ್ಣವಾಗಿ ಆಧುನೀಕರಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ನಮ್ಮ ಪೊಲೀಸ್ ಪಡೆಯ ಪ್ರತಿಯೊಬ್ಬ ಸಿಬ್ಬಂದಿಯೂ ಪ್ರಾಮಾಣಿಕತೆ ಮತ್ತು ವೃತ್ತಿಪರತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸುರಕ್ಷಿತ ಹಾಗೂ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸಲಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

