ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಸರ್ಕಾರಿ ಆಶ್ರಮ ಶಾಲೆಯೊಂದರಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶಾಲೆಯ 22 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಾಲೆಯ ಅಡುಗೆ ಸಿಬ್ಬಂದಿ ಗಣಪತ್ ಗವಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಆದರೆ ಪ್ರಕರಣದ ತನಿಖೆ ಮುಂದುವರಿದಂತೆ ಮತ್ತಷ್ಟು ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ವಿಶೇಷವಾಗಿ, ಈ ವ್ಯಕ್ತಿ ಈ ಹಿಂದೆಯೇ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದಿದ್ದರೂ, ಆತನಿಗೆ ಬಾಲಕಿಯರ ಶಾಲೆಯಲ್ಲಿ ಕೆಲಸ ನೀಡಿದ್ದು ಹೇಗೆ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಈ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ.
ಊಟಕ್ಕೆ ಬಂದಾಗ ಲೈಂಗಿಕ ಕಿರುಕುಳ
ಠಾಣೆ ಜಿಲ್ಲೆಯ ತೆಂಬಾ ಪ್ರದೇಶದಲ್ಲಿರುವ ಆದಿವಾಸಿ ಆಶ್ರಮ ಶಾಲೆಯಲ್ಲಿ ಈ ಘಟನೆ ನಡೆದಿದೆ. ಊಟ ಬಡಿಸುವ ಸಂದರ್ಭದಲ್ಲಿ ಆರೋಪಿ ಗಣಪತ್ ಗವಿಲ್ ತಮ್ಮನ್ನು ಅಸಭ್ಯವಾಗಿ ಸ್ಪರ್ಶಿಸುತ್ತಿದ್ದನು ಹಾಗೂ ಕಳೆದ ಕೆಲ ಸಮಯದಿಂದ ಕಿರುಕುಳ ನೀಡುತ್ತಿದ್ದನು ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ಆಗಸ್ಟ್ 24ರಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಬಾಲಕಿಯರಿಂದ ದೂರು ಸ್ವೀಕರಿಸಿದ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದು, ಶಾಲಾ ಆಡಳಿತದೊಂದಿಗೆ ಮಾತನಾಡಿ ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಹಿಂದೆಯೂ ಪೋಕ್ಸೋ ಪ್ರಕರಣ..! ಮತ್ತೆ ಕೆಲಸಕ್ಕೆ ಸೇರಿದ್ದು ಹೇಗೆ?
ಆರೋಪಿಯ ಹಿನ್ನೆಲೆಯ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿದಾಗ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಗಣಪತ್ ಗವಿಲ್ ಈ ಹಿಂದೆಯೇ ಪೋಕ್ಸೋ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಜೈಲು ಸೇರಿದ್ದನು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಹಿಂದೆ ಮತ್ತೊಂದು ಆಶ್ರಮ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ಆತ ಹಲವು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಆಗಲೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಅಧಿಕಾರಿಗಳು ಆತನನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದರು. ಪ್ರಕರಣದಲ್ಲಿ ಆರೋಪಿ ಕೆಲಕಾಲ ಜೈಲು ಶಿಕ್ಷೆ ಅನುಭವಿಸಿ ಬಳಿಕ ಹೊರಬಂದಿದ್ದನು.
ಗಂಭೀರ ಪೋಕ್ಸೋ ಅಪರಾಧದ ಹಿನ್ನೆಲೆ ಹೊಂದಿದ್ದ ಹಾಗೂ ಜೈಲಿಗೆ ಹೋಗಿ ಬಂದಿದ್ದ ವ್ಯಕ್ತಿಯನ್ನು ಮತ್ತೆ ಮತ್ತೊಂದು ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿ ಹೇಗೆ ನೇಮಿಸಲಾಯಿತು ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ.
ಆತನನ್ನು ಯಾರು ಕೆಲಸಕ್ಕೆ ನೇಮಿಸಿದರು? ಹಿನ್ನೆಲೆ ಪರಿಶೀಲನೆ ನಡೆಸದೇ ನೇಮಕಾತಿ ಮಾಡಿದ್ದು ಹೇಗೆ? ಎಂಬ ಕೋನದಲ್ಲಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿಯರ ಪೋಷಕರು ಆಗ್ರಹಿಸಿದ್ದಾರೆ.

