ಸಾವು ಯಾರಿಗೆ, ಹೇಗೆ, ಯಾವಾಗ ಬರುತ್ತದೆ ಎಂಬುದೇ ಗೊತ್ತಿಲ್ಲ..! ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಲ್ಲೂ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯವಾಗಿದ್ದವರು ಕೂಡ ಏಕಾಏಕಿ ಕುಸಿದು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಆತಂಕ ಮೂಡಿಸುತ್ತಿವೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ 47 ವರ್ಷದ ವೈದ್ಯರೊಬ್ಬರು ಹಠಾತ್ ಕುಸಿದು ಮೃತಪಟ್ಟಿರುವ ಘಟನೆ ಇದೀಗ ಮತ್ತೊಮ್ಮೆ ಬೆಚ್ಚಿಬೀಳಿಸಿದೆ.
ಅಸ್ಸಾಂನ ನಾಗಾಂವ್‌ನಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ 47 ವರ್ಷದ ವೈದ್ಯರೊಬ್ಬರು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ನಾಗಾಂವ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಡಾ. ಶಾಹಿನ್ ರಹಮಾನ್ ಅವರು ಆಗಸ್ಟ್ 27ರಂದು ರಾತ್ರಿ ಸುಮಾರು 7.36ರ ವೇಳೆಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಈ ವೇಳೆ ಅವರು ಏಕಾಏಕಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.
ತಕ್ಷಣವೇ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ನೀಡುವ ಮುನ್ನವೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.ಇತ್ತೀಚಿನ ವರ್ಷಗಳಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆ ಹಲವರು ಏಕಾಏಕಿ ಕುಸಿದು ಮೃತಪಟ್ಟಿರುವ ಘಟನೆಗಳು ವರದಿಯಾಗುತ್ತಿವೆ.
ಉತ್ತರಾಖಂಡದಲ್ಲೂ ಜಿಮ್‌ನಲ್ಲಿ ಪೊಲೀಸ್ ಅಧಿಕಾರಿ ಸಾವು
ಈ ವರ್ಷದ ಜೂನ್‌ನಲ್ಲಿ ಉತ್ತರಾಖಂಡದ ಚಂಪಾವತ್ ಜಿಲ್ಲೆಯಲ್ಲಿ 38 ವರ್ಷದ ವಿಶೇಷ ಕಾರ್ಯಾಚರಣೆ ಪಡೆ (SOG) ಅಧಿಕಾರಿ ಗಿರೀಶ್ ಭಟ್ ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದರು. ಅಸ್ವಸ್ಥರಾಗಿದ್ದ ಅವರು ಏಕಾಏಕಿ ಕುಸಿದುಬಿದ್ದಿದ್ದು, ಜಿಮ್‌ನಲ್ಲಿದ್ದವರು ಅವರನ್ನು ಸಮೀಪದ ಖತಿಮಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದರು.
ಪುಣೆಯಲ್ಲೂ ವರ್ಕೌಟ್ ವೇಳೆ ವ್ಯಕ್ತಿ ಸಾವು
ಕಳೆದ ವರ್ಷ ಆಗಸ್ಟ್ 2ರಂದು ಪುಣೆಯ ಚಿಂಚ್ವಾಡ್ ಪ್ರದೇಶದಲ್ಲಿ 37 ವರ್ಷದ ಉದ್ಯಮಿ ಮಿಲಿಂದ್ ಕುಲಕರ್ಣಿ ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದರು.
ಸುಮಾರು ಆರು ತಿಂಗಳಿಂದ ನಿಯಮಿತವಾಗಿ ಜಿಮ್‌ಗೆ ಹೋಗುತ್ತಿದ್ದ ಅವರು ವ್ಯಾಯಾಮದ ನಡುವೆ ಸ್ವಲ್ಪ ವಿರಾಮ ಪಡೆದು ನೀರು ಕುಡಿದ ಬಳಿಕ ತಲೆ ಸುತ್ತಿ ಕುಸಿದುಬಿದ್ದಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಕುಟುಂಬದ ಆಪ್ತರ ಪ್ರಕಾರ, ಅವರ ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಯ ಹಿನ್ನೆಲೆಯೂ ಇತ್ತು.
ವ್ಯಾಯಾಮದ ವೇಳೆ ಹಠಾತ್ ಸಾವುಗಳ ಬಗ್ಗೆ ಮತ್ತೆ ಚರ್ಚೆ
ವ್ಯಾಯಾಮದ ವೇಳೆ ಅಥವಾ ವ್ಯಾಯಾಮ ಮುಗಿಸಿದ ಕೆಲವೇ ಸಮಯದಲ್ಲಿ ಸಂಭವಿಸುವ ಇಂತಹ ಹಠಾತ್ ಸಾವುಗಳು, ವಿಶೇಷವಾಗಿ ಯುವಕರಲ್ಲೂ ಕಂಡುಬರುತ್ತಿರುವುದು ಆತಂಕ ಮೂಡಿಸಿದೆ. ನಿಯಮಿತ ದೈಹಿಕ ವ್ಯಾಯಾಮ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದ್ದು, ದೀರ್ಘಾವಧಿಯಲ್ಲಿ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಅಪರೂಪದ ಸಂದರ್ಭಗಳಲ್ಲಿ ತೀವ್ರವಾದ ವ್ಯಾಯಾಮವು, ವಿಶೇಷವಾಗಿ ಪತ್ತೆಯಾಗದ ಅಥವಾ ಆಂತರಿಕ ಹೃದಯ ಸಮಸ್ಯೆ ಹೊಂದಿರುವವರಲ್ಲಿ, ಗಂಭೀರ ಹೃದಯ ಸಂಬಂಧಿ ತೊಂದರೆಗೆ ಕಾರಣವಾಗಬಹುದು.

