ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಕರ್ನಾಟಕದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ಧಾರವಾಡದ ಕೆ.ಐ.ಎ.ಡಿ.ಬಿ. ವಲಯ ಕಛೇರಿಯನ್ನು ಸ್ಥಳಾಂತರ ಮಾಡುವ ತೀರ್ಮಾನವನ್ನು ಕೈ ಬಿಡಲಾಗಿದೆ.
ಈ ಕುರಿತು ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ರಾಜ್ಯ ಸರ್ಕಾರ ಧಾರವಾಡದ ಕೆ.ಐ.ಎ.ಡಿ.ಬಿ. ವಲಯ ಕಛೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಲು ನಿರ್ಧರಿಸಿತ್ತು’ ಎಂದು ಹೇಳಿದ್ದಾರೆ.
‘ಧಾರವಾಡದ ಕೆ.ಐ.ಎ.ಡಿ.ಬಿ. ವಲಯ ಕಛೇರಿ ಸುಮಾರು ನಲವತ್ತು ವರ್ಷಕ್ಕಿಂತಲೂ ಹಳೆಯ ಕಛೇರಿಯಾಗಿದ್ದು ಉತ್ತರ ಕರ್ನಾಟಕದ ಅಭಿವೃದ್ಧಿ ಅದರಲ್ಲೂ ವಿಶೇಷವಾಗಿ ಧಾರವಾಡ ಜಿಲ್ಲೆಯ ಕೈಗಾರಿಕೆಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸುತ್ತಿರುವ ಏಕೈಕ ವಲಯ ಕಛೇರಿಯಾಗಿದ್ದು ಅದನ್ನು ಬೇರೆಡೆಗೆ ಸ್ಥಳಾಂತರ ಮಾಡುವ ನಿರ್ಧಾರ ಹಿಂಪಡೆಯುವಂತೆ ನಾನು ರಾಜ್ಯ ಸರ್ಕಾರಕ್ಕೆ ಅಗ್ರಹ ಪಡಿಸಿದ್ದೆ’ ಎಂದು ತಿಳಿಸಿದ್ದಾರೆ.
‘ರಾಜ್ಯ ಸರ್ಕಾರ ಇನ್ನೂ ಹೆಚ್ಚಿನ ಆಡಳಿತಾತ್ಮಕ ಕಛೇರಿಯ ಅವಶ್ಯಕತೆ ಮನಗಂಡಲ್ಲಿ ಈಗಿರುವ ಕಚೇರಿಗಳನ್ನೂ ಸ್ಥಳಾಂತರಿಸದೆ ಅವಶ್ಯಕತೆ ಇದ್ದಲ್ಲಿ ಅಲ್ಲಿನ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಹೊಸ ಕಚೇರಿಗಳನ್ನು ಪ್ರಾರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದೆನು’ ಎಂದು ಪೋಸ್ಟ್ ಹಾಕಿದ್ದಾರೆ.
‘ನನ್ನ ಆಗ್ರಹಕ್ಕೆ ಸ್ಪಂದಿಸಿ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯಸಚಿವರಾದ ಶ್ರೀ ಎಂ.ಬಿ ಪಾಟೀಲ @MBPatil ಅವರು ಧಾರವಾಡದ ಕೆ.ಐ.ಎ.ಡಿ.ಬಿ. ವಲಯ ಕಛೇರಿಯ ಸ್ಥಳಾಂತರವನ್ನು ಸ್ಥಗಿತಗೊಳಿಸಿದ್ದು, ಅವರಿಗೆ ಅನಂತ ಧನ್ಯವಾದಗಳು’ ಎಂದು ಹೇಳಿದ್ದಾರೆ.
ಆದೇಶದ ವಿವರ: ಈ ಕುರಿತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಆದೇಶವನ್ನು ಸಹ ಹೊರಡಿಸಿದೆ. ಈ ಆದೇಶ ವಿಶೇಷ ಭೂಸ್ವಾಧೀನಾಧಿಕಾರಿಯವರ ವಿಭಾಗ, ಕೆ.ಐ.ಎ.ಡಿ.ಬಿ. ವಲಯ ಕಛೇರಿ, ಧಾರವಾಡ ಕಛೇರಿಯನ್ನು ಬೆಳಗಾವಿ ನಗರಕ್ಕೆ ಸ್ಥಳಾಂತರಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಭೂಸ್ವಾಧೀನಾಧಿಕಾರಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಧಾರವಾಡ ಕಛೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸಲು ತಿಳಿಸಲಾಗಿತ್ತು.
ಹಾಗೂ, ವಿಶೇಷ ಭೂಸ್ವಾಧೀನಾಧಿಕಾರಿ, ಕೆ.ಐ.ಎ.ಡಿ.ಬಿ. ವಲಯ ಕಛೇರಿ, ಧಾರವಾಡ ಕಛೇರಿಯನ್ನು ಸಿಬ್ಬಂದಿ ಸಮೇತ ಬೆಳಗಾವಿ ನಗರಕ್ಕೆ ಸ್ಥಳಾಂತರಿಸಿ, ವಿಶೇಷ ಭೂಸ್ವಾಧೀನಾಧಿಕಾರಿಗಳು, ಕೆ.ಐ.ಎ.ಡಿ.ಬಿ. ವಲಯ ಕಛೇರಿ, ಬೆಳಗಾವಿ ಎಂದು ನವೀಕರಿಸಲಾಗಿದೆಯೆಂದು ಸಹ ತಿಳಿಸಲಾಗಿತ್ತು.
ಮುಂದುವರೆದು, ಆಡಳಿತಾತ್ಮಕ ಕಾರಣಗಳಿಂದ, ಮುಂದಿನ ಆದೇಶದವರೆಗೂ, ವಿಶೇಷ ಭೂಸ್ವಾಧೀನಾಧಿಕಾರಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಧಾರವಾಡ ಕಛೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸುವ ಕಾರ್ಯವನ್ನು ಸ್ಥಗಿತಗೊಳಿಸಲು ತಿಳಿಸಲಾಗಿದೆ ಎಂದು ಹೇಳಿದೆ.

