ದೀಪಾವಳಿ ಹಬ್ಬದ ಪ್ರಯುಕ್ತ ಶಿವಮೊಗ್ಗ ಜಿಲ್ಲೆ ಹಾಗೂ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗುತ್ತಿರುವ ಪಟಾಕಿ ಮಾರಾಟ ಮಳಿಗೆಗಳು, ಪಟಾಕಿ ತಯಾರಿಕೆ, ಮಾರಾಟ ಹಾಗೂ ಇತರ ಪ್ರಕ್ರಿಯೆಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಮತ್ತು ತಿದ್ದುಪಡಿ ಕಾಯ್ದೆ 2016ರ ಪ್ರಕಾರ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ (ಪಟಾಕಿ ಮಾರಾಟ/ತಯಾರಿಕೆ ಸೇರಿದಂತೆ) ಕೆಲಸಕ್ಕೆ ನಿಯೋಜಿಸುವುದು ಕಾನೂನುಬಾಹಿರವಾಗಿದೆ.
ಒಂದು ವೇಳೆ ಪಟಾಕಿ ಮಳಿಗೆಗಳಲ್ಲಿ ಅಥವಾ ತಯಾರಿಕಾ ಘಟಕಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡಿರುವುದು ಕಂಡುಬಂದರೆ, ಸಂಬಂಧಪಟ್ಟ ಮಾಲೀಕರ ವಿರುದ್ಧ ಬಾಲಕಾರ್ಮಿಕ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಎಚ್ಚರಿಸಿದೆ.
ಗೃಹಲಕ್ಷ್ಮಿ ಯೋಜನೆ : 3 ಕಂತುಗಳ ಒಟ್ಟು ರೂ. 6000 ಹಣ ಬಿಡುಗಡೆ – ದೀಪಾವಳಿ ಕೊಡುಗೆ : ಸಿ.ಎಸ್. ಚಂದ್ರಭೂಪಾಲ್
ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲಾ 2000 ರೂಪಾಯಿಯಂತೆ 3 ಕಂತಿನ ಹಣ ಒಟ್ಟು 6000 ರೂಪಾಯಿಗಳು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿದ್ದು, ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಗೃಹಲಕ್ಷ್ಮಿಯ ಹಣ ಫಲಾನುಭವಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಹಕಾರಿಯಾಗಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ್ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 33 ಕಂತುಗಳಲ್ಲಿ ಹಣ ಫಲಾನುಭವಿಗಳ ಅವರ ಬ್ಯಾಂಕ್ ಖಾತೆಗೆ ಜಮೆಯಾಗಿದ್ದು, ಈಗ 34, 35, 36ನೇ ಕಂತಿನ ಹಣ ಒಂದೇ ಸಲ ಸರ್ಕಾರದಿಂದ ಬಿಡುಗಡೆಯಾಗಿದೆ. ಈ ವರೆಗೆ ಪ್ರತಿ ಫಲಾನುಭವಿಗೆ 33 ಕಂತುಗಳಲ್ಲಿ, ಒಬ್ಬರಿಗೆ ಎರಡು ಸಾವಿರ ರೂಪಾಯಿಗಳಂತೆ ಒಟ್ಟು 66 ಸಾವಿರ ರೂಪಾಯಿ ಸೇರಿದಂತೆ ಈ ವರೆಗೆ ಒಬ್ಬ ಮಹಿಳಾ ಫಲಾನುಭವಿಗೆ 72 ಸಾವಿರ ತಲುಪಿದಂತಾಗಿದೆ ಎಂದು ಸಿ.ಎಸ್. ಚಂದ್ರಭೂಪಾಲ್ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆಯ 3 ಕಂತುಗಳ ಒಟ್ಟಿಗೆ ಹಣವನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 3,79,538 ಅರ್ಹ ಮಹಿಳಾ ಫಲಾನುಭವಿಗಳಿಗೆ ಇಲ್ಲಿಯವರೆಗೆ ಒಟ್ಟು ರೂ. 2714,03,36,000 ಕೋಟಿ ರೂಪಾಯಿ ಸಂದಾಯವಾಗಿದ್ದು, ಕರ್ನಾಟಕ ಸರ್ಕಾರದ ಸಾಧನೆಯಿಂದಾಗಿ ಗೃಹಲಕ್ಷ್ಮಿ ಫಲಾನುಭವಿ ಮನೆ ಒಡತಿಗೆ ನೀಡುತ್ತಿರುವ ಗೃಹಲಕ್ಷ್ಮಿ ಹಣ ಅವರಿಗೆ ವಿವಿಧ ರೀತಿಯಲ್ಲಿ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀಕರಣವನ್ನು ಉತ್ತೇಜಿಸಿದೆ ಎಂದು ಅವರು ತಿಳಿಸಿದ್ದಾರೆ.

