ಹುಟ್ಟಿದ ಮೇಲೆ ಸಾವು ನಿಶ್ಚಿತ. ಆದರೆ ಸಾಯುವ ಆ ಕೊನೆಯ ಕ್ಷಣದಲ್ಲಿ ಮನುಷ್ಯ ಏನು ಯೋಚಿಸುತ್ತಾನೆ? ಅವನ ಮೆದುಳಿನಲ್ಲಿ ಯಾವ ಭಾವನೆಗಳು ಓಡುತ್ತವೆ? ಈ ಶತಮಾನದ ಒಗಟಿಗೆ ವಿಜ್ಞಾನಿಗಳು ಈಗ ಆಶ್ಚರ್ಯಕರ ಉತ್ತರ ಕಂಡುಹಿಡಿದಿದ್ದಾರೆ. ಸಾವಿನ ದಡದಲ್ಲಿರುವ ಮನುಷ್ಯನ ಮೆದುಳು ಕೇವಲ ಸೆಕೆಂಡುಗಳಲ್ಲಿ ಇಡೀ ಜೀವನದ ‘ಬೆಸ್ಟ್ ಮೊಮೆಂಟ್ಸ್’ಗಳನ್ನು ರಿವೈಂಡ್ ಮಾಡುತ್ತದೆಯಂತೆ
ಆ 900 ಸೆಕೆಂಡುಗಳ ರಹಸ್ಯ ಪತ್ತೆ
ಫ್ರಾಂಟಿಯರ್ಸ್ ಇನ್ ಏಜಿಂಗ್ ನ್ಯೂರೋಸೈನ್ಸ್ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಈ ಸಂಶೋಧನೆಯು ಜಗತ್ತನ್ನೇ ಬೆರಗುಗೊಳಿಸಿದೆ. 87 ವರ್ಷದ ಅಪಸ್ಮಾರ (Epilepsy) ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಿದ್ದಾಗ ಆಕಸ್ಮಿಕವಾಗಿ ಅವರು ಹೃದಯಾಘಾತದಿಂದ ನಿಧನರಾದರು. ಆ ಸಮಯದಲ್ಲಿ ಅವರ ಮೆದುಳಿಗೆ ಅಳವಡಿಸಲಾಗಿದ್ದ EEG (ಎಲೆಕ್ಟ್ರೋಎನ್ಸೆಫಾಲೋಗ್ರಾಮ್) ಸಾಧನವು, ಅವರು ಸಾಯುವ 15 ನಿಮಿಷ ಮೊದಲಿನಿಂದ ಹಿಡಿದು ಹೃದಯ ಬಡಿತ ನಿಂತ 30 ಸೆಕೆಂಡುಗಳ ನಂತರದವರೆಗಿನ ಮೆದುಳಿನ ಚಟುವಟಿಕೆಯನ್ನು ಸೆರೆಹಿಡಿದಿದೆ.
ಡಾ. ಅಜ್ಮಲ್ ಜೆಮ್ಮಾರ್ ನೇತೃತ್ವದ ತಂಡ ಕಂಡುಕೊಂಡ ಸತ್ಯವೇನೆಂದರೆ, ಸಾವಿನ ಹೊತ್ತಿನಲ್ಲಿ ಮೆದುಳಿನಲ್ಲಿ ಗಾಮಾ ಆಂದೋಲನಗಳು (Gamma Oscillations) ತೀವ್ರವಾಗಿ ಕೆಲಸ ಮಾಡುತ್ತವೆ.
ಇವು ಸಾಮಾನ್ಯವಾಗಿ ನಾವು ಕನಸು ಕಾಣುವಾಗ ಅಥವಾ ಹಳೆಯ ನೆನಪುಗಳನ್ನು ಮೆಲುಕು ಹಾಕುವಾಗ ಸಕ್ರಿಯವಾಗುವ ಅಲೆಗಳು.
ಇದರರ್ಥ, ಮನುಷ್ಯ ಸಾಯುವ ಮುನ್ನ ಅವನ ಜೀವನದ ಅತ್ಯಂತ ಸಂತೋಷದ ಮತ್ತು ಪ್ರಮುಖ ಘಟನೆಗಳು ಒಂದು ಸಿನಿಮಾದಂತೆ ಕಣ್ಣಮುಂದೆ ಬಂದು ಹೋಗುತ್ತವೆ. ಇದನ್ನು ವಿಜ್ಞಾನಿಗಳು ಮೆಮೊರಿ ಫ್ಲ್ಯಾಶ್‌ಬ್ಯಾಕ್ ಎಂದು ಕರೆದಿದ್ದಾರೆ.
ಕೇವಲ ಒಳ್ಳೆಯ ನೆನಪುಗಳೇ ಯಾಕೆ?
ಸಂಶೋಧನೆಯ ಪ್ರಕಾರ, ಮೆದುಳು ಆ ಅಂತಿಮ ಕ್ಷಣದಲ್ಲಿ ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ ಮತ್ತು ಮೆದುಳಿನ ಅಲೆಗಳಾದ ಡೆಲ್ಟಾ, ತೀಟಾ, ಆಲ್ಫಾ ಮತ್ತು ಬೀಟಾಗಳ ನಡುವೆ ಒಂದು ಅದ್ಭುತ ಸಮನ್ವಯ ಏರ್ಪಡುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಸಮಯದಲ್ಲಿ ಮೆದುಳು ಹೆಚ್ಚಾಗಿ ಸಂತೋಷದ ಕ್ಷಣಗಳನ್ನು ಮಾತ್ರ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇದು ಸಾವಿನ ನೋವನ್ನು ಮರೆಸುವ ಪ್ರಕೃತಿಯ ಒಂದು ವಿಚಿತ್ರ ನಿಯಮವಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.

