ಬೆಂಗಳೂರು : ಮನೆಗೆ ಗ್ಯಾಸ್ ಸಿಲಿಂಡರ್ ತಂದುಕೊಟ್ಟಿದ್ದ ಡೆಲಿವರಿ ಬಾಯ್ ಕ್ಯಾಪ್ ತೆಗೆಯುತ್ತಿದ್ದಂತೆ ಜೋರಾದ ಶಬ್ದದೊಂದಿಗೆ ಗ್ಯಾಸ್ ಸೋರಿಕೆಯಾಗಿದೆ. ಅಷ್ಟೇ! ಪಕ್ಕದಲ್ಲೇ ಉರಿಯುತ್ತಿದ್ದ ದೀಪದ ಜ್ವಾಲೆ ಗ್ಯಾಸ್‌ಗೆ ತಗುಲಿದ್ದು, ನೋಡನೋಡುತ್ತಿದ್ದಂತೆ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಕಂಡು ಡೆಲಿವರಿ ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಈ ಭಯಾನಕ ದೃಶ್ಯ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೀಪದ ಜ್ವಾಲೆ ತಗುಲುತ್ತಿದ್ದಂತೆ ಹೊತ್ತಿಕೊಂಡ ಬೆಂಕಿ!
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಈ ಘಟನೆ ನಡೆದಿದೆ. ಮನೆಯ ಬಾಗಿಲ ಬಳಿ ಎಣ್ಣೆ ದೀಪವನ್ನು ಹಚ್ಚಿಡಲಾಗಿತ್ತು. ಇದೇ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡಲು ಬಂದಿದ್ದ ಸಿಬ್ಬಂದಿ ಸಿಲಿಂಡರ್ ಅನ್ನು ಬಾಗಿಲಿನ ಬಳಿ ಇಟ್ಟು ಅದರ ಕ್ಯಾಪ್ ತೆಗೆಯಲು ಮುಂದಾಗಿದ್ದಾರೆ.
ಆದರೆ, ಕ್ಯಾಪ್ ತೆಗೆಯುತ್ತಿದ್ದಂತೆ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿರುವುದು ಕಂಡುಬಂದಿದೆ. ಪಕ್ಕದಲ್ಲೇ ಉರಿಯುತ್ತಿದ್ದ ದೀಪದ ಜ್ವಾಲೆ ಗ್ಯಾಸ್‌ಗೆ ತಗುಲುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆಗಳು ಸಿಲಿಂಡರ್ ಅನ್ನು ಆವರಿಸಿದ್ದು, ಅಲ್ಲಿದ್ದವರ ಎದೆ ಝಲ್ ಎನ್ನುವಂತಾಗಿದೆ.
ಪ್ರಾಣ ಉಳಿಸಿಕೊಳ್ಳಲು ಓಡಿದ ಡೆಲಿವರಿ ಬಾಯ್!
ಬೆಂಕಿಯ ಜ್ವಾಲೆ ತನ್ನತ್ತ ಬರುತ್ತಿರುವುದನ್ನು ಕಂಡ ಡೆಲಿವರಿ ಸಿಬ್ಬಂದಿ ಒಂದು ಕ್ಷಣವೂ ತಡಮಾಡದೆ ಅಲ್ಲಿಂದ ಓಡಿದ್ದಾರೆ. ಈ ವೇಳೆ ಸಿಲಿಂಡರ್ ನೆಲಕ್ಕೆ ಬಿದ್ದಿದ್ದು, ಅದರೊಳಗಿಂದ ಬೆಂಕಿಯ ಜ್ವಾಲೆಗಳು ನಿರಂತರವಾಗಿ ಹೊರಬರುತ್ತಿದ್ದವು.
ಬೆಂಕಿಯ ತೀವ್ರತೆಗೆ ಮನೆಯ ಬಾಗಿಲ ಬಳಿ ಇಟ್ಟಿದ್ದ ಗಿಡಗಳು ಸುಟ್ಟುಹೋಗಿವೆ. ಅಷ್ಟೇ ಅಲ್ಲ, ಹತ್ತಿರದ ಕಂಬಿಯ ಮೇಲೆ ಒಣಗಲು ಹಾಕಿದ್ದ ಎರಡು ಬಟ್ಟೆಗಳಿಗೂ ಬೆಂಕಿ ಹೊತ್ತಿಕೊಂಡಿದೆ.ಆದರೆ, ಅಲ್ಲಿಂದ ಓಡಿ ಹೋಗಿದ್ದ ಸಿಬ್ಬಂದಿ ಮತ್ತೆ ವಾಪಸ್ ಬಂದಿದ್ದಾರೆ. ಉರಿಯುತ್ತಿದ್ದ ಬಟ್ಟೆಗಳನ್ನು ತೆಗೆದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಬಳಿಕ ಸಿಲಿಂಡರ್ ಅನ್ನು ಮನೆಯ ಬಾಗಿಲಿನಿಂದ ದೂರಕ್ಕೆ ಕಾಲಿನಿಂದ ತಳ್ಳಿದ್ದಾರೆ.
ಈ ವೇಳೆ ಮನೆಯೊಳಗಿನಿಂದ ನೀರನ್ನು ತಂದುಕೊಡಲಾಗಿದ್ದು, ಸಿಬ್ಬಂದಿ ಸಿಲಿಂಡರ್‌ನ ಬೆಂಕಿಗೆ ನೀರು ಸುರಿದು ನಂದಿಸಲು ಪ್ರಯತ್ನಿಸಿದ್ದಾರೆ. ಬಳಿಕ ಮತ್ತಷ್ಟು ನೀರು ತರಲು ಮನೆಯೊಳಗೆ ಹೋಗಿದ್ದಾರೆ.
ಆದರೆ, LPG ಗ್ಯಾಸ್ ಬೆಂಕಿಗೆ ನೀರು ಸುರಿಯುವುದು ಸರಿಯಾದ ಅಗ್ನಿ ಸುರಕ್ಷತಾ ಕ್ರಮವಲ್ಲ. ನೀರು ಸುರಿಯುವುದರಿಂದ ಗ್ಯಾಸ್ ಸೋರಿಕೆ ನಿಲ್ಲುವುದಿಲ್ಲ ಅಥವಾ ಬೆಂಕಿ ನಂದುತ್ತದೆ ಎಂಬ ಖಾತರಿಯಿಲ್ಲ. ಇಂತಹ ಸಂದರ್ಭಗಳಲ್ಲಿ ಸೂಕ್ತ ಡ್ರೈ ಕೆಮಿಕಲ್ ಅಗ್ನಿಶಾಮಕ ಸಾಧನಗಳನ್ನು ಬಳಸುವುದು ಅಗತ್ಯ. ಪರಿಸ್ಥಿತಿ ಅಪಾಯಕಾರಿಯಾಗಿದ್ದರೆ ಸ್ಥಳದಿಂದ ದೂರ ಸರಿದು ಅಗ್ನಿಶಾಮಕ ದಳದ ನೆರವು ಪಡೆಯಬೇಕು.
ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ!
ಈ ಇಡೀ ಘಟನೆ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡು ಜ್ವಾಲೆಗಳು ಹೊರಬರುತ್ತಿರುವುದು, ಸಿಬ್ಬಂದಿ ಓಡಿಹೋಗುವುದು, ಮತ್ತೆ ವಾಪಸ್ ಬಂದು ಬೆಂಕಿ ನಂದಿಸಲು ಪ್ರಯತ್ನಿಸುವ ದೃಶ್ಯಗಳು ವೈರಲ್ ಆಗಿವೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ದೊಡ್ಡ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ.

