2026 ಸ್ವಾಗತಿಸಲು ಜನರು ತಯಾರಾಗಿದ್ದಾರೆ. ಮೈಸೂರು ಜಿಲ್ಲೆಯ ವಿವಿಧ ತಾಣಗಳಲ್ಲಿ ಪಾರ್ಟಿ ಮಾಡಲು ಜನರು ಯೋಜನೆ ರೂಪಿಸಿದ್ದಾರೆ. ಆದರೆ ಮೈಸೂರು ಜಿಲ್ಲಾ ಪೊಲೀಸರು ಪ್ರಕಟಣೆಯೊಂದನ್ನು ಹೊರಡಿಸಿದ್ದು, ಕಬಿನಿ ಹಿನ್ನೀರು ಪ್ರದೇಶಕ್ಕೆ ಆಗಮಿಸುವಂತಿಲ್ಲ ಎಂದು ಹೇಳಿದ್ದಾರೆ.
ಅಂತರಸಂತೆ ಪೊಲೀಸ್ ಠಾಣೆ ವ್ಯಾಪ್ತಿಗೆ ಕಬಿನಿ ಹಿನ್ನೀರಿನ ಪ್ರದೇಶ ಸೇರುತ್ತದೆ. ಜನರು ಹಿನ್ನೀರು ನೋಡುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹೊಸ ವರ್ಷದ ಆಚರಣೆ ಸಂಬಂಧ ಪ್ರವಾಸಿಗರು ಕಬಿನಿ ಹಿನ್ನೀರಿನಲ್ಲಿ ಇಳಿದು ಈಜಾಡುವ ಸಮಯದಲ್ಲಿ ಅನಾಹುತಗಳು ಆಗದಂತೆ ಕ್ರಮ ಕೈಗೊಳ್ಳಲಾಗಿದೆ.
ಪ್ರವಾಸಿಗರು ಕಬಿನಿ ಹಿನ್ನೀರಿನಲ್ಲಿ ಮದ್ಯಪಾನ ಮಾಡುವುದು, ವೀಲಿಂಗ್ ಮಾಡುವುದು, ವಾಹನಗಳನ್ನು ನೀರಿನಲ್ಲಿ ಇಳಿಸುವುದು, ಧ್ವನಿ ವರ್ಧಕಗಳನ್ನು ಬಳಕೆ ಮಾಡುವುದು, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವುದನ್ನು ನಿರ್ಬಂಧಿಸಲಾಗಿದೆ.
ಹಾಗೂ ಹಿನ್ನೀರಿನ ಪ್ರದೇಶದಲ್ಲಿ ಟೆಂಟ್ಗಳನ್ನು ಹಾಕಿಕೊಂಡು ಮೋಜು ಮಸ್ತಿ ಮಾಡುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಸೈಬರ್ ಕ್ರೈಂ ಬಗ್ಗೆ ಜಾಗೃತಿ: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸೈಬರ್ ಕ್ರೈಂ ಕುರಿತು ಸಹ ಮೈಸೂರು ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹೊಸ ವರ್ಷದ ಗಿಫ್ಟ್ ಕಾರ್ಡ್ ಅಥವಾ ಲಿಂಕ್ ಕ್ಲಿಕ್ ಮಾಡುವ ಮೊದಲು ಯೋಚಿಸಿ, ಸ್ಕ್ಯಾಮ್ ಮುಕ್ತವೆಂದು ಖಚಿತಪಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ವೆಬ್ಸೈಟ್ಗಳನ್ನು ಎರಡು ಬಾರಿ ಚೆಕ್ ಮಾಡಿಕೊಳ್ಳಿ, ಅನುಮಾನ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೈಬರ್ ವಂಚನೆಗೆ ಒಳಗಾದಲ್ಲಿ ಸೈಬರ್ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ಎಂದು ಸೂಚಿಸಿದ್ದಾರೆ.
ಮೈಸೂರು ಪೊಲೀಸರು ಹೊಸ ವರ್ಷದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ. ಹೋಟೆಲ್ ಮತ್ತು ಲಾಡ್ಜ್ಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಅನುಮಾಸ್ಪದ ವ್ಯಕ್ತಿಗಳು ವಾಸ್ತವ್ಯ ಹೂಡಿದ್ದಾರೆಯೇ? ಎಂಬ ಕುರಿತು ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.
ಮೈಸೂರು ನಗರ ಪೊಲೀಸರು ಹೊಸ ವರ್ಷಾಚರಣೆ ನಡೆಸುವವರಿಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಎಲ್ಲಾ ಕ್ಲಬ್, ರೆಸಾರ್ಟ್ಗಳಲ್ಲಿ ಹೊಸ ವರ್ಷದ ಕಾರ್ಯಕ್ರಮಗಳು ರಾತ್ರಿ 1 ಗಂಟೆಗೆ ಮುಕ್ತಾಯವಾಗಬೇಕು. ಆವರಣ ಬಿಟ್ಟು ಹೊರಗೆ ಕೂಟಗಳನ್ನು ಆಯೋಜಿಸಬಾರದು ಎಂದು ಸೂಚನೆ ನೀಡಲಾಗಿದೆ.
4 ಡಿಸಿಪಿ, 8 ಎಸಿಪಿ, 34 ಪಿಐ, 69 ಪಿಎಸ್ಐ, 138 ಎಎಸ್ಐ, 1062 ಕಾನ್ಸ್ಟೇಬಲ್, 155 ಮಂದಿ ಮಹಿಳಾ ಕಾನ್ಸ್ಟೇಬಲ್, ಕೆಎಸ್ಆರ್ಪಿ 5 ತುಕಡಿ, 2 ಕಮಾಂಡೋ ಪಡೆ, ಶ್ವಾನದಳ ಮತ್ತು ಅಶ್ವಾರೋಹಿ ಪಡೆಗಳನ್ನು ಮೈಸೂರು ನಗರದಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ವಿದ್ಯಾರ್ಥಿಗಳು, ಯುವಕರು ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು. ಕಾನೂನು ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ಕೊಟ್ಟಿದ್ದಾರೆ.

