ಕರ್ನಾಟಕದಲ್ಲಿ ಹಾಸನ ವಿಮಾನ ನಿಲ್ದಾಣದ ಕಾಮಗಾರಿ ನಡೆಯುತ್ತಿದೆ. ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣವಾಗುತ್ತಾ ಬಂದಿದೆ. ಈಗ ರಾಜ್ಯದಲ್ಲಿ ಮತ್ತೊಂದು ವಿಮಾನ ನಿಲ್ದಾಣದ ನಿರ್ಮಾಣದ ಕುರಿತು ಚಿಂತನೆ ಆರಂಭವಾಗಿದೆ.
ಹೌದು ಈ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ವಿಧಾನ ಪರಿಷತ್ ಕಲಾಪದಲ್ಲಿ ಮಾಹಿತಿ ನೀಡಿದ್ದಾರೆ. ಪ್ರತಿಪಕ್ಷದ ಸದಸ್ಯರೊಬ್ಬರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಕುರಿತು ಮಾಹಿತಿ ನೀಡಿದರು.
ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, “ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಜನರಿಗೆ ಸಮಾನವಾಗಿ ಅನುಕೂಲವಾಗುವಂತೆ ಸೂಕ್ತ ಸ್ಥಳದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸುವ ಕುರಿತು ಗಂಭೀರ ಚಿಂತನೆ ನಡೆಯುತ್ತಿದೆ” ಎಂದು ಹೇಳಿದರು.
“ಈ ಮಹತ್ವದ ವಿಷಯದಲ್ಲಿ ಮೂರೂ ಜಿಲ್ಲೆಗಳ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಸಚಿವರು ತಿಳಿಸಿದರು.
“2010ರಲ್ಲಿ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 900 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ ಹಿಂದಿನ ಸಂಸ್ಥೆಯು ನಿಯಮಾನುಸಾರ ಕಾರ್ಯಾರಂಭ ಮಾಡದ ಕಾರಣ ಅದರೊಂದಿಗೆ ಮಾಡಿದ್ದ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಇದೀಗ ಯೋಜನೆಯನ್ನು ಹೊಸದಾಗಿ ಮುಂದುವರಿಸಲು DPR ಸಿದ್ಧಪಡಿಸುವ ಸಲುವಾಗಿ ಸಲಹೆಗಾರರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭವಾಗಿದೆ” ಎಂದರು.
“ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳ ಅನುಭವದಿಂದ ಪಾಠ ಪಡೆದು, ಭವಿಷ್ಯದಲ್ಲಿ ಪ್ರಯಾಣಿಕರ ಕೊರತೆಯಿಂದ ಸೊರಗುವ ಪರಿಸ್ಥಿತಿ ಉಂಟಾಗದಂತೆ ಮೂರೂ ಜಿಲ್ಲೆಗಳಿಗೆ ಸಮರ್ಪಕವಾಗಿ ಸೇವೆ ನೀಡುವ ಸಮಗ್ರ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶವಿದೆ” ಎಂದು ವಿವರಣೆ ನೀಡಿದರು.
“ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುವ ಮೂಲಕ ಉತ್ತರ ಕರ್ನಾಟಕದ ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಹೊಸ ಕಳೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯದ ಒಟ್ಟಾರೆ ಹಿತದೃಷ್ಟಿಯಿಂದ ಸರ್ವರನ್ನೂ ವಿಶ್ವಾಸಕ್ಕೆ ಪಡೆದು ಶೀಘ್ರದಲ್ಲೇ ಸೂಕ್ತ ಸ್ಥಳವನ್ನು ನಿಗದಿಪಡಿಸಲಾಗುವುದು” ಎಂದು ತಿಳಿಸಿದರು.

