ಅಹಮದಾಬಾದ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಭಾರತದ ವೇಗಿ ಅರ್ಶ್‌ದೀಪ್ ಸಿಂಗ್ ತಪ್ಪಿತಸ್ಥರೆಂದು ಸಾಬೀತಾಗಿದೆ. ಇದರ ಪರಿಣಾಮವಾಗಿ, ಈ ಎಡಗೈ ವೇಗಿಗೆ ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಲಾಗಿದೆ.
ಹೌದು. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಂಗಳವಾರ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಅರ್ಶ್‌ದೀಪ್ ಅವರು ಐಸಿಸಿ ನೀತಿ ಸಂಹಿತೆಯ ವಿಧಿ 2.9 ಅನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದೆ. ಈ ನಿಯಮವು “ಅಂತರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಆಟಗಾರನ ಮೇಲೆ ಅಥವಾ ಆಟಗಾರನ ಹತ್ತಿರ ಅನುಚಿತವಾಗಿ ಅಥವಾ ಅಪಾಯಕಾರಿ ರೀತಿಯಲ್ಲಿ ಚೆಂಡನ್ನು (ಅಥವಾ ಯಾವುದೇ ಕ್ರಿಕೆಟ್ ಉಪಕರಣವನ್ನು) ಎಸೆಯುವುದಕ್ಕೆ” ಸಂಬಂಧಿಸಿದೆ.
ಇದರ ಜೊತೆಗೆ, ಅರ್ಶ್‌ದೀಪ್ ಅವರ ಶಿಸ್ತಿನ ದಾಖಲೆಗೆ ಒಂದು ‘ಡಿಮೆರಿಟ್ ಪಾಯಿಂಟ್’ ಸೇರಿಸಲಾಗಿದೆ. ಕಳೆದ 24 ತಿಂಗಳುಗಳಲ್ಲಿ ಅವರು ಮಾಡಿದ ಮೊದಲ ತಪ್ಪು ಇದಾಗಿದೆ. ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನಲ್ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಪ್ರಸ್ತಾಪಿಸಿದ ಶಿಕ್ಷೆಯನ್ನು ಅರ್ಶ್‌ದೀಪ್ ಒಪ್ಪಿಕೊಂಡಿದ್ದಾರೆ, ಹೀಗಾಗಿ ಯಾವುದೇ ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ.
ಏನಿದು ಘಟನೆ? ನ್ಯೂಜಿಲೆಂಡ್ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಅರ್ಶ್‌ದೀಪ್ ಅವರು ತಮ್ಮ ಫಾಲೋ-ಥ್ರೂನಲ್ಲಿ ಚೆಂಡನ್ನು ಫೀಲ್ಡ್ ಮಾಡಿ, ಬ್ಯಾಟರ್ ಡೇರಿಲ್ ಮಿಚೆಲ್ ಅವರ ಪ್ಯಾಡ್‌ಗೆ ತಗುಲುವಂತೆ ಆಕ್ರಮಣಕಾರಿಯಾಗಿ ಮತ್ತು ಅನುಚಿತವಾಗಿ ಎಸೆದಿದ್ದರು. ಆನ್-ಫೀಲ್ಡ್ ಅಂಪೈರ್‌ಗಳಾದ ರಿಚರ್ಡ್ ಇಲಿಂಗ್ವರ್ತ್ ಮತ್ತು ಅಲೆಕ್ಸ್ ವಾರ್ಫ್, ಮೂರನೇ ಅಂಪೈರ್ ಅಲ್ಲಾವುದ್ದೀನ್ ಪಾಲೇಕರ್ ಮತ್ತು ನಾಲ್ಕನೇ ಅಂಪೈರ್ ಆಡ್ರಿಯನ್ ಹೋಲ್ಡ್‌ಸ್ಟಾಕ್ ಈ ಆರೋಪವನ್ನು ಹೊರಿಸಿದ್ದಾರೆ.
ಸಾಮಾನ್ಯವಾಗಿ ‘ಲೆವೆಲ್ 1’ ಉಲ್ಲಂಘನೆಗಳಿಗೆ ಅಧಿಕೃತ ಎಚ್ಚರಿಕೆ, ಆಟಗಾರನ ಪಂದ್ಯದ ಸಂಭಾವನೆಯ ಗರಿಷ್ಠ ಶೇ. 50ರಷ್ಟು ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ವಿಧಿಸಲಾಗುತ್ತದೆ.

