ಬೆಂಗಳೂರು: ಹಾಸನದ ಹಲವು ಗ್ರಾಮಗಳಲ್ಲಿ ಕಾರ್ಖಾನೆಯ ರಾಸಾಯನಿಕ ಮಿಶ್ರಣಗೊಂಡು ಕುಡಿಯುವ ನೀರು ಕಲುಷುತವಾಅಗಿದ್ದು, ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ, ಇಂತಹ ನೀರು ಜನರು ಕುಡಿದರೆ ಗತಿಯೇನು? ಎಂದು ಕಲುಷಿತ ನೀರಿನ ಬಾಟಲಿ ಪ್ರದರ್ಶಿಸಿ ಸರ್ಕಾರದ ಗಮನ ಸೆಳೆದಿದ್ದಾರೆ.
ಹಾಸನ ತಾಲೂಕಿನ ಕೌಶಿಕ ಗ್ರಾಮದ ಕಾರ್ಖಾನೆಗಳಿಂದ ಹೊರಬರುತ್ತಿರುವ ರಾಸಾಯನಿಕ ತ್ಯಾಜ್ಯಗಳು, ಕೊಳವೆ ಬಾವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅನೇಕ ಮನೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ಸೂರಜ್ ರೇವಣ್ಣ ತಿಳಿಸಿದರು. ಅಲ್ಲಿ ಪೂರೈಕೆಯಾದ ಕಲುಷಿತ ನೀರಿನ ಬಾಟಲಿಯನ್ನು ಪ್ರದರ್ಶಿಸುವ ಮೂಲಕ ಸಮಸ್ಯೆಯ ಬಗ್ಗೆ ವಿಧಾನಮಂಡಲದ ಕಲಾಪದಲ್ಲಿ ಗಮನ ಸೆಳೆದರು.
ನೀರು ಈ ರೀತಿ ಕಲುಷಿತವಾಗಿದೆ. ಇಂಥ ನೀರು ಕುಡಿದರೆ ಅಲ್ಲಿನ ಜನರ ಗತಿಯೇನು? ಕೌಶಿಕ ಗ್ರಾಮದ ಬಳಿ ಇರುವ ವೈನ್ ಸೂಪರ್ ಪ್ರೈಡ್ ಮೊದಲಾದ ವಿವಿಧ ಕಾರ್ಖಾನೆಗಳ ಲ್ಯಾಬೋರೇಟರಿಗಳಿಂದ ರಾಸಾಯನಿಕ ತ್ಯಾಜ್ಯಗಳನ್ನು ಯಾವ ಮಾನದಂಡ ಅನುಸರಿಸದೇ ಅವೈಜ್ಞಾನಿಕವಾಗಿ ಬಿಡುತ್ತಿರುವುದರಿಂದ ಈ ರಾಸಾಯನಿಕ ಕೊಳವೆಬಾವಿಗಳಿಗೆ ಸೇರುತ್ತಿದೆ. ಇದು ಗಂಭೀರ ಸಮಸ್ಯೆಯಾಗಿದ್ದು, ಇದಕ್ಕೆ ಪರಿಹಾರ ಕಲ್ಪಿಸಬೇಕಿದೆ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರ ಖಂಡ್ರೆ, ಈಗಾಗಲೇ ಈ ಸಮಸ್ಯೆಯನ್ನು ನಿವಾರಣೆ ಮಾಡಲಾಗಿದೆ. ಇನ್ನೂ ಆತಂಕವಿದ್ದರೆ ಕೂಡಲೇ ಇನ್ನೊಂದು ವೈಜ್ಞಾನಿಕ ಪರಿವೀಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗುವುದು. ಕೊಳವೆ ಬಾವಿಗಳಿಗೆ ರಾಸಾಯನಿಕ ಹರಿಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.

