ನೀಟ್ ಅಕ್ರಮದ ವಿರುದ್ಧ ಜೆನ್ಝೀಗಳು ರಸ್ತೆಗಿಳಿದು ನಡೆಸಿದ ಪ್ರತಿಭಟನೆ ಯಶಸ್ವಿಯಾಯಿತು. ಅಕ್ರಮ ನಡೆದರೂ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿದ್ದ ಕೇಂದ್ರ ಸರ್ಕಾರ ಪ್ರತಿಭಟನೆಯ ಬಳಿಕ ತುಟಿಬಿಚ್ಚಿತು. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದರು.
ಹಲವು ದಿನಗಳ ಪ್ರತಿಭಟನೆ ಬಳಿಕ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಕೊಟ್ಟು ಸಚಿವ ಸ್ಥಾನದಿಂದ ಕೆಳಗಿಳಿದರು. ಹೀಗೆ ಯುವ ಜನತೆ ರಸ್ತೆಗಿಳಿದು ಪ್ರತಿಭಟಿಸಿ ತಮಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಂಡ ಬಳಿಕ ಇದೀಗ ದೇಶದಲ್ಲಿ ಮತ್ತೊಂದು ಪ್ರತಿಭಟನೆಯನ್ನು ನಡೆಸೋಣ ಎಂದು ಕೆಲ ಮೇಲ್ಜಾತಿ ಯುವಕ ಹಾಗೂ ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಆರಂಭಿಸಿದ್ದಾರೆ.
ಅದುವೇ ‘ರಿಸರ್ವೇಷನ್ ಹಠಾವೋ ಆಂದೋಲನ’. ನೀಟ್ ಪ್ರತಿಭಟನೆಯ ಹಾಗೆ ಈ ರಸ್ತೆಗಿಳಿಯದಿದ್ದರೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ರಿಸರ್ವೇಷನ್ ಹಠಾವೋ ಆಂದೋಲನ’ ಎಂಬ ಖಾತೆ ತೆರೆಯಲಾಗಿದ್ದು, ಜಾತಿ ಆಧಾರಿತ ಮೀಸಲಾತಿ ವಿರುದ್ಧ ಹೋರಾಡೋಣ, ಅದನ್ನು ಕಿತ್ತು ಹಾಕೋಣ ಎಂದು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ಈ ಖಾತೆಗೆ ಕೆಲವೇ ದಿನಗಳಲ್ಲಿ ಐವತ್ತು ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಹರಿದುಬಂದಿದ್ದು, ಮೀಸಲಾತಿ ತೆರವುಗೊಳಿಸುವವರೆಗೂ ಬಿಡುವುದಿಲ್ಲ ಎಂದು ಪಣ ತೊಟ್ಟಿದ್ದಾರೆ. ಇನ್ನು ಮೀಸಲಾತಿ ಎಂಬುದು ಸಾಧಾರಣ ವಿಷಯವಲ್ಲ, ಹಲವು ವರ್ಷಗಳಿಂದ ಕೆಲ ವರ್ಗಗಳ ಮೇಲೆ ಸವರ್ಣೀಯರು ನಿರಂತರ ಅನ್ಯಾಯ ಎಸಗುತ್ತಾ, ಕೀಳಾಗಿ ನಡೆಸಿಕೊಳ್ಳುತ್ತಾ ಬಂದ ತರುವಾಯ ಅಂಬೇಡ್ಕರ್ ದೇಶದಲ್ಲಿ ಸಮಾನತೆ ತರಲು ತಂದ ಅಸ್ತ್ರ.
ಇಂದಿಗೂ ಸಹ ದೇಶದ ಹಲವೆಡೆ ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದ್ದು, ಅಂತಹ ಮನಸ್ಥಿತಿ ತೊಲಗುವವರೆಗೂ ಮೀಸಲಾತಿ ತೆಗೆಯುವ ಅಥವಾ ತೆಗೆಸುವ ಮಾತು ಆಗದಿರುವ ಕೆಲಸ ಎಂಬ ಅಭಿಪ್ರಾಯಗಳು ಸಾಮಾನ್ಯ ಜನರ ಬಾಯಲ್ಲಿ ಹರಿದಾಡುತ್ತಿವೆ.

