ನವದೆಹಲಿ: ಯುವಕರನ್ನು ಮಾದಕದ್ರವ್ಯಗಳಿಂದ ಮುಕ್ತಗೊಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ‘ವಿಕಸಿತ ಭಾರತಕ್ಕಾಗಿ ಮಾದಕದ್ರವ್ಯ ಮುಕ್ತ ಯುವ ಸಂಕಲ್ಪ ಅಭಿಯಾನ ನಶಾಮುಕ್ತ ಭಾರತಕ್ಕೆ ಚಾಲನೆ ನೀಡಿದ್ದಾರೆ.
ದೇಶದ ಯುವಜನತೆಯನ್ನು ಮಾದಕದ್ರವ್ಯಗಳ ಜಾಲದಿಂದ ದೂರವಿಟ್ಟು, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಪ್ರಧಾನಿ ಮೋದಿ ಈ ಅಭಿಯಾನ ಆರಂಭಿಸಿದ್ದಾರೆ.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ನಾವು ನೋಡುತ್ತಿರುವ ಅಭಿಯಾನವು ವ್ಯಕ್ತಿ, ಕುಟುಂಬ, ಸಮಾಜಕ್ಕಾಗಿ ಮತ್ತು ಮುಖ್ಯವಾಗಿ ರಾಷ್ಟ್ರಕ್ಕಾಗಿ ಎಂದು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕೆ ಮಾದಕ ದ್ರವ್ಯ ಮುಕ್ತ ಯುವಕರು ಅತ್ಯಗತ್ಯ. ದೇಶದ ಪ್ರಗತಿಗೆ ಯುವಶಕ್ತಿಯೇ ಅಡಿಪಾಯ. ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡಲು ದೇಶದ ಯುವಜನರು ಯಾವುದೇ ರೀತಿಯ ವ್ಯಸನಕ್ಕೆ ಬಲಿಯಾಗದಂತೆ ತಡೆಯುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು.
ದೇಶದ ಪ್ರತಿಯೊಂದು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮಾದಕದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮಗಳು ಮತ್ತು ‘ಸಂಕಲ್ಪ ಪ್ರಮಾಣ ವಚನ’ ಸ್ವೀಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಯುವಜನರು ಮಾದಕದ್ರವ್ಯಗಳ ದುಷ್ಪರಿಣಾಮಗಳ ವಿರುದ್ಧ ಜಾಗೃತಿ ಮೂಡಿಸಲು ‘ಮೈ ಭಾರತ್’ ಪೋರ್ಟಲ್ ಮೂಲಕ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಉತ್ತೇಜಿಸಲಾಗುತ್ತಿದೆ. ಮಾದಕದ್ರವ್ಯ ಪೂರೈಕೆ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಹಾಗೂ ಡ್ರಗ್ಸ್ ಜಾಲದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಲು ಸ್ಥಳೀಯ ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

