ಕಿರುತೆರೆ ಮತ್ತು ರಿಯಾಲಿಟಿ ಶೋಗಳ ಮೂಲಕ ಹೆಸರು ಮಾಡಿರುವ ಆಕಾಂಕ್ಷಾ ಚೌಧರಿ ತಮ್ಮ ಜೀವನದ ಕಪ್ಪು ಪುಟವೊಂದನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋ ಒಂದರಿಂದ ಹೊರಬಿದ್ದ ಬೆನ್ನಲ್ಲೇ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮಗೆ ಎದುರಾದ ಕ್ಯಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ಮನರಂಜನಾ ಮತ್ತು ಬ್ಯೂಟಿ ಪೇಜೆಂಟ್ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಪ್ರಭಾವಿ ವ್ಯಕ್ತಿಯೊಬ್ಬರು ತಮಗೆ ಆಮಿಷವೊಡ್ಡಿ ಶೋಷಣೆಗೆ ಯತ್ನಿಸಿದ್ದರು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದ ಆರಂಭಿಕ ದಿನಗಳಲ್ಲಿ ಈ ಘಟನೆ ನಡೆದಿದೆ. ಸ್ಪರ್ಧೆಯ ತರಬೇತಿ, ಉಡುಪು ಹಾಗೂ ಇತರ ವೆಚ್ಚಗಳಿಗಾಗಿ ಸುಮಾರು 1 ರಿಂದ 2 ಲಕ್ಷ ರೂಪಾಯಿ ಅಗತ್ಯವಿತ್ತು. ಕುಟುಂಬದಿಂದ ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗದಿದ್ದಾಗ, ಕ್ಷೇತ್ರದಲ್ಲೇ ಹೆಸರುವಾಸಿಯಾಗಿದ್ದ ಮತ್ತು ಅನೇಕ ಸ್ಪರ್ಧೆಗಳಿಗೆ ತೀರ್ಪುಗಾರರಾಗಿದ್ದ ವ್ಯಕ್ತಿಯೊಬ್ಬರನ್ನು ಆಕಾಂಕ್ಷಾ ನೆರವಿಗಾಗಿ ಸಂಪರ್ಕಿಸಿದ್ದರು. ಹಣದ ಬದಲಾಗಿ ಅವರ ಬಳಿ ಕೆಲಸ ಮಾಡಲು ಸಿದ್ಧವಿರುವುದಾಗಿಯೂ ತಿಳಿಸಿದ್ದರು.
ಸಹಾಯ ಮಾಡುವ ನೆಪದಲ್ಲಿ ಆ ವ್ಯಕ್ತಿ ತಮ್ಮ ಮನೆಗೆ ಆಕಾಂಕ್ಷಾರನ್ನು ಕರೆಸಿಕೊಂಡಿದ್ದರು. ಹಿಂದೆಂದೂ ಅವರ ನಡುವೆ ಯಾವುದೇ ಕೆಟ್ಟ ಅನುಭವ ಇಲ್ಲದ ಕಾರಣ, ಯಾವುದೇ ಅನುಮಾನವಿಲ್ಲದೆ ನಟಿ ಅವರ ಮನೆಗೆ ತೆರಳಿದ್ದರು. ಆದರೆ ಮನೆ ತಲುಪುತ್ತಿದ್ದಂತೆ ಆ ವ್ಯಕ್ತಿಯ ನಡವಳಿಕೆ ಬದಲಾಗಿತ್ತು. ಕೈಹಿಡಿದು ಎಳೆಯಲು ಯತ್ನಿಸಿದಾಗ ಆಕಾಂಕ್ಷಾ ಆತನನ್ನು ತಡೆದು ದೂರ ತಳ್ಳಿದ್ದಾರೆ. ಆ ಬಳಿಕ ಆ ವ್ಯಕ್ತಿ ನೇರವಾಗಿಯೇ ಲೈಂಗಿಕ ಬೇಡಿಕೆಯಿಟ್ಟಿದ್ದು, ತಿಂಗಳಿಗೆ ಇಂತಿಷ್ಟು ಬಾರಿ ಲೈಂಗಿಕವಾಗಿ ಸಹಕರಿಸಿದರೆ ಹಣಕಾಸಿನ ನೆರವು ನೀಡುವುದಾಗಿ ಹೇಳಿದ್ದಾಗಿ ನಟಿ ತಿಳಿಸಿದ್ದಾರೆ.
ಈ ಪ್ರಸ್ತಾಪವನ್ನು ತಕ್ಷಣವೇ ತಿರಸ್ಕರಿಸಿದ ನಟಿ ಅಲ್ಲಿಂದ ಹೊರಬಂದಿದ್ದಾರೆ. ‘ನನ್ನ ಪ್ರಸ್ತಾಪ ತಿರಸ್ಕರಿಸಿದರೆ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡುತ್ತೀಯಾ’ ಎಂದು ಆ ವ್ಯಕ್ತಿ ಎಚ್ಚರಿಸಿದ್ದರಂತೆ. ಆದರೆ ತಮ್ಮ ನಿರ್ಧಾರಕ್ಕೆ ಎಂದಿಗೂ ವಿಷಾದಿಸುವುದಿಲ್ಲ ಎಂದಿರುವ ಆಕಾಂಕ್ಷಾ, ಸ್ವಂತ ಪರಿಶ್ರಮ ಮತ್ತು ಸಾಮರ್ಥ್ಯದ ಮೇಲೆ ತಾವು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

