ಮಂಗಳೂರು: ಆನ್ಲೈನ್ ಹೂಡಿಕೆ ಹೆಸರಲ್ಲಿ ಸೈಬರ್ ವಂಚಕರು 61 ವರ್ಷದ ಮಹಿಳೆಯೊಬ್ಬರಿಗೆ ಬರೋಬ್ಬರಿ 16.2 ಲಕ್ಷ ವಂಚಿವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಫೇಸ್ ಬುಕ್ ನಲ್ಲಿ ಹಾಕಿದ್ದ ಜಾಹೀರಾತನ್ನು ನಂಬಿ ಮಹಿಳೆ ಹೂಡಿಕೆ ಮಾಡಿದ್ದರಂತೆ. ಇದರಿಂದ ಮೋಸ ಹೋಗಿ಼ದ್ದಾಗಿ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸೈಬರ್ ಆರ್ಥಿಕ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಕಳೆದ ಏಪ್ರಿಲ್ನಲ್ಲಿ ಮಹಿಳೆ ಫೇಸ್ಬುಕ್ನಲ್ಲಿ ಹೂಡಿಕೆಗೆ ಸಂಬಂಧಿಸಿದ ಜಾಹೀರಾತೊಂದರ ಲಿಂಕ್ ಕ್ಲಿಕ್ ಮಾಡಿ, ಟೆಲಿಗ್ರಾಂ ಗ್ರೂಪ್ಗೆ ಸೇರಿಕೊಂಡಿದ್ದರು. ಯುನೈಟೆಡ್ ಕಿಂಗ್ಡಮ್ (UK) ದೇಶದ ಕೋಡ್ ಹೊಂದಿರುವ ಫೋನ್ ಸಂಖ್ಯೆಗಳಿಂದ ಅಪರಿಚಿತ ವ್ಯಕ್ತಿಯೊಬ್ಬ ಸಂಪರ್ಕಿಸಿ, ಹೆಚ್ಚಿನ ಲಾಭ ನೀಡುವುದಾಗಿ ಆಮಿಷ ಒಡ್ಡಿದ್ದ.
ವಂಚಕನ ಮಾತು ನಂಬಿದ ಮಹಿಳೆ, ಏಪ್ರಿಲ್ 18 ರಂದು ಮೊದಲ ಬಾರಿಗೆ 20,372 ರೂ. ವರ್ಗಾಯಿಸಿದ್ದರು. ತದನಂತರ ಜೂನ್ 12 ರಂದು 3 ಲಕ್ಷ ರೂ., ಜೂನ್ 22 ರಂದು 3 ಲಕ್ಷ ರೂ., ಜೂನ್ 24 ರಂದು 4 ಲಕ್ಷ ರೂ. ಹಾಗೂ ಜೂನ್ 30 ರಂದು 6 ಲಕ್ಷ ರೂ.ನಂತೆ ಹಂತ-ಹಂತವಾಗಿ ಒಟ್ಟು 16.2 ಲಕ್ಷ ರೂ. ಹಣವನ್ನು ವಂಚಕರು ನೀಡಿದ ಬ್ಯಾಂಕ್ ಖಾತೆಗಳಿಗೆ ಪಾವತಿಸಿದ್ದಾರೆ.
ಹಣ ಹಿಂತಿರುಗಿಸುವಂತೆ ಕೇಳಿದಾಗ ಯಾವುದೇ ಪ್ರತಿಕ್ರಿಯೆ ಸಿಗದೇ ಇದ್ದಾಗ ತಾನು ಮೋಸ ಹೋಗಿರುವುದು ಮಹಿಳೆಗೆ ಅರಿವಾಗಿದೆ. ತಕ್ಷಣ ಅವರು ಮಂಗಳೂರು ಸಿಇಎನ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

