ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗರ ಜೀವನಾಡಿ ನಮ್ಮ ಮೆಟ್ರೋ ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಗಳಿಗಾಗಿ ಈ ತಿಂಗಳು 4 ಚಾಲಕರಹಿತ ರೈಲುಗಳು ಬಿಎಂಆರ್‌ಸಿಎಲ್ ಸೇರಲಿವೆ.
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಪಿಂಕ್ ಲೈನ್ ಮಾರ್ಗ ಮೇ ತಿಂಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆಯಿದ್ದು, ವಿಮಾನ ನಿಲ್ದಾಣದ ಬ್ಲೂ ಲೈನ್ ಕಾಮಗಾರಿಯೂ ವೇಗ ಪಡೆದುಕೊಂಡಿದೆ.
ಬೆಂಗಳೂರಿನ ಟ್ರಾಫಿಕ್ ಮತ್ತು ವಾಯುಮಾಲಿನ್ಯದ ಸಮಸ್ಯೆಗೆ ಮುಕ್ತಿ ನೀಡಲು ಬಿಎಂಆರ್‌ಸಿಎಲ್ ತನ್ನ ಜಾಲ ವಿಸ್ತರಣೆಗೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಗರದ ಬಹುನಿರೀಕ್ಷಿತ ಪಿಂಕ್ ಲೈನ್ ಮತ್ತು ಬ್ಲೂ ಲೈನ್ ಮೆಟ್ರೋ ಮಾರ್ಗಗಳಿಗಾಗಿ ಅತ್ಯಾಧುನಿಕ ಚಾಲಕರಹಿತ ರೈಲುಗಳು ಶೀಘ್ರದಲ್ಲೇ ಆಗಮಿಸಲಿವೆ.
ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಪಿಂಕ್ ಲೈನ್ ಮಾರ್ಗದ ಕಾಮಗಾರಿ ಅಂತಿಮ ಹಂತದಲ್ಲಿದೆ. ವಿಶೇಷವಾಗಿ ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ ಒಟ್ಟು ಆರು ಮೆಟ್ರೋ ನಿಲ್ದಾಣಗಳನ್ನು ಮೇ ತಿಂಗಳಿನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ಈ ಮಾರ್ಗಕ್ಕಾಗಿ ಈಗಾಗಲೇ 5 ರೈಲುಗಳು ಬಂದಿದ್ದು, ಏಪ್ರಿಲ್ ವೇಳೆಗೆ ಮತ್ತೊಂದು ರೈಲು ಆಗಮಿಸಲಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 59 ಕಿ.ಮೀ ಉದ್ದದ ಬ್ಲೂ ಲೈನ್ ಮಾರ್ಗವು ಬೆಂಗಳೂರಿನ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ.
ಸಿಲ್ಕ್ ಬೋರ್ಡ್ ಟು ಕೆ.ಆರ್. ಪುರ: 19.75 ಕಿ.ಮೀ (13 ನಿಲ್ದಾಣಗಳು), ಕೆ.ಆರ್. ಪುರ ಟು ಏರ್ ಪೋರ್ಟ್: 38 ಕಿ.ಮೀ ವಿಸ್ತೀರ್ಣ- ಈ ಬೃಹತ್ ಮಾರ್ಗಕ್ಕಾಗಿ ಒಟ್ಟು 38 ಚಾಲಕರಹಿತ ರೈಲುಗಳಿಗೆ ಬಿಇಎಂಎಲ್‌ಗೆ ಆರ್ಡರ್ ನೀಡಲಾಗಿದೆ. ಇದರ ಮೊದಲ ಹಂತವಾಗಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಎರಡು ರೈಲುಗಳು ಬರಲಿವೆ ಎಂದು ತಿಳಿದುಬಂದಿದೆ. ಪಿಂಕ್ ಲೈನ್ ಶೀಘ್ರ ಆರಂಭವಾದರೆ ತಾವರೆಕೆರೆ ಮತ್ತು ಸಿಲ್ಕ್ ಬೋರ್ಡ್ ಭಾಗದ ಟ್ರಾಫಿಕ್ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.

