ನೆಲಮಂಗಲ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಟಿ. ಬೇಗೂರಿನಲ್ಲಿರುವ ಖ್ಯಾತ ಸಿದ್ಧಾರ್ಥ ಮೆಡಿಕಲ್ ಕಾಲೇಜಿಗೆ ಅಪರಿಚಿತರಿಂದ ಬಾಂಬ್ ಬೆದರಿಕೆ ಬಂದಿದೆ. ಇ-ಮೇಲ್ ಮೂಲಕ ಬಂದ ಈ ಸಂದೇಶದಿಂದ ಕಾಲೇಜು ಆವರಣದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ.
ಅಪರಿಚಿತ ವ್ಯಕ್ತಿಗಳಿಂದ ಅಧಿಕೃತ ಇ-ಮೇಲ್ ಐಡಿಗೆ ಬಾಂಬ್ ಇಟ್ಟಿರುವುದಾಗಿ ಸಂದೇಶ ರವಾನೆಯಾಗಿದೆ.: ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಶ್ವಾನದಳ ಮತ್ತು ಬಾಂಬ್ ವಿಲೇವಾರಿ ದಳ ಧಾವಿಸಿದೆ.
ಕಾಲೇಜು ಆವರಣದಲ್ಲಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.ಪೊಲೀಸರು ಇಡೀ ಕಾಲೇಜು ಕಟ್ಟಡವನ್ನು ಕೂಲಂಕಷವಾಗಿ ತಪಾಸಣೆ ನಡೆಸುತ್ತಿದ್ದಾರೆ.ಈ ಬೆದರಿಕೆ ಇ-ಮೇಲ್ ಕೇವಲ ಕಿಡಿಗೇಡಿಗಳ ಕೃತ್ಯವೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಸಂಚಿದೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಶಾಲೆ ಮತ್ತು ಕಾಲೇಜುಗಳಿಗೆ ಇಂತಹ ಹುಸಿ ಬಾಂಬ್ ಬೆದರಿಕೆ ಇ-ಮೇಲ್ಗಳು ಬರುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.

