ಮುಂಬೈ: ಗಣೇಶ ಮೂರ್ತಿ ಮೆರವಣಿಗೆ ವೇಳೆ ವಿದ್ಯುತ್ ಅವಘಡ ಸಂಭವಿಸಿ ಕರೆಂಟ್ ಶಾಕ್ ಹೊಡೆದು ಬಾಲಕಿ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಲಾಲ್ ಬಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 8 ವರ್ಷದ ಬಾಲಕಿ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಾಲಚೌಕಿಯ ದತ್ತರಾಮ್ ಲಾಡ್ ಮಾರ್ಗದಲ್ಲಿ ಗಣಪತಿ ಮೆರವಣಿಗೆ ತೆರಳುತ್ತಿದ್ದ ವೇಳೆ ಗಣಪತಿ ಪೆಂಡಾಲ್ ಗೆ ವಿದ್ಯುತ್ ಪ್ರವಹಿಸಿ ಈ ದುರಂತ ಸಂಭವಿಸಿದೆ. ಕಲಾಚೌಕಿ ವಿಭಾಗ್ ಸಾರ್ವಜನಿಕ ಉತ್ಸವ ಮಂಡಲದ ಪ್ರವೇಶದ್ವಾರದ ಬಳಿ ಇದ್ದ ತಾತ್ಕಾಲಿಕ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ನೆಲದ ಮೇಲೆ ವಿದ್ಯುತ್ ಪ್ರವಹಿಸಿದ್ದು, ಗಣೇಶ ಪೆಂಡಾಲ್ ಗೆ ತಗುಲಿದೆ. ಪರಿಣಾಮ ಎಂಟು ವರ್ಷದ ಬಾಲಕಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ 12 ವರ್ಷದ ಮತ್ತೊಬ್ಬ ಬಾಲಕಿ ಸೇರಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಮುಂಜಾನೆ 2.20 ರ ಸುಮಾರಿಗೆ ಭಕ್ತರ ಭಾರೀ ಜನಸಂದಣಿಯ ನಡುವೆಯೇ ಈ ದುರ್ಘಟನೆ ನಡೆದಿದೆ.
ಪ್ರವೇಶದ್ವಾರದ ಬಳಿ ಇದ್ದ ತಾತ್ಕಾಲಿಕ ಕುಡಿಯುವ ನೀರು ಮತ್ತು ತಂಪು ಪಾನೀಯ ಅಂಗಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಜಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ತಕ್ಷಣವೇ ಸುತ್ತಲಿನ ಪ್ರದೇಶದಲ್ಲಿ ಕರೆಂಟ್ ಹರಿದು ಆರು ಮಂದಿ ಆಘಾತಕ್ಕೊಳಗಾಗಿದ್ದಾರೆ. 8 ವರ್ಷದ ರಾಗಿಣಿ ಯಾದವ್ ಹಾಗೂ 33 ವರ್ಷದ ಸುಜಾತ ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
12 ವರ್ಷದ ರುಹಿ ಸಿಂಗ್ ಎಂಬ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಿರಣ್ ಅಕ್ಬರ್ ನಾಯಕ್ (19, ತನ್ವಿ ನರೇಶ್ ಹಂಡೆ (19) ಮತ್ತು ಸಾಹಿಲ್ ಸಂದೀಪ್ ತಾರೆ (19) ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ FIR ದಾಖಲು
ಮೈಸೂರು ಜಿಲ್ಲೆಯ ಟಿ.ನರಸೀಪುರ ಗಣೇಶೋತ್ಸವ ವಿವಾದ ಹಾಗೂ ಆನಂತರದ ಬಿಜೆಪಿ ನಾಯಕರ ಪ್ರತಿಭಟನೆ ಬೆನ್ನಲ್ಲೇ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ಸಿಂಹ ಹಾಗೂ ಇತರರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪೊಲಿಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಗುಂಪುಗಳು ಹಾಗೂ ಜಾತಿಗಳ ನಡುವೆ ದ್ವೇಷಕ್ಕೆ ಉತ್ತೇಜನ, ಧಾರ್ಮಿಕ ನಂಬಿಕೆಗಳಿಗೆ ಅವಮಾನ, ಪ್ರಚೋದನಕಾರಿ ಭಾಷಣ ಮಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ಟಿ.ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಮಸೀದಿ ರಸ್ತೆಗಳಲ್ಲಿ ಗಣೇಶ ಮೆರವಣಿಗೆ ಹೋಗುವಂತಿಲ್ಲ. ಪೊಲೀಸರು ಸೂಚಿಸಿದ ಮಾರ್ಗದಲ್ಲೇ ಹೋಗಬೇಕು. ಇಲ್ಲವಾದಲ್ಲಿ ಗ್ರಹಚಾರ ಬಿಡಿಸುತ್ತೇನೆ. ನಾವು ಮಾತನಾಡಲ್ಲ, ಮಾಡಿ ತೋರಿಸುತ್ತೇವ್ ಎ ಎಂದು ಗಣೇಶ ಪ್ರತಿಷ್ಠಾಪನೆ ಸಮಿತಿ ಸದಸ್ಯರನ್ನು ಠಾಣೆಗೆ ಕರೆದು ಎಚ್ಚರಿಕೆ ನೀಡಿದ್ದರು.
ಇನ್ಸ್ ಪೆಕ್ಟರ್ ಹೇಳಿಕೆ ಖಂಡಿಸಿ ಅವರ ಅಮಾನತಿಗೆ ಆಗ್ರಹಿಸಿ ಪ್ರತಾಪ್ ಸಿಂಹ ಹಾಗೂ ಬಿಜೆಪಿ ನಾಯಕರು ಭಾರಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಇನ್ಸ್ ಪೆಕ್ಟರ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಬೃಹತ್ ಶೋಭಾಯಾತ್ರೆಯನ್ನು ನಡೆಸಲಾಗಿತ್ತು. ಈ ವೇಳೆ ಪ್ರತಾಪ್ ಸಿಂಹ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

