ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಈಗ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. 50:50 ಅನುಪಾತದಡಿ ನಿವೇಶನ ಪಡೆದ ಹಲವರಿಗೆ ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತಂಡ ನೋಟಿಸ್ ಜಾರಿ ಮಾಡಿದೆ.
ಮುಡಾದಿಂದ 50:50 ಅನುಪಾತದಲ್ಲಿ ನಿವೇಶನ ಪಡೆದವರು, ಬಡಾವಣೆ ಮಾಲೀಕರು ಮತ್ತು ಸೈಟ್ ಬರೆಸಿಕೊಂಡವರು ಸೇರಿದಂತೆ ಹಲವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಈಗಾಗಲೇ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದರೂ, ನಿವೇಶನ ಪಡೆದ ಇತರ ವ್ಯಕ್ತಿಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯೇ ಎಂಬ ಬಗ್ಗೆ ಲೋಕಾಯುಕ್ತರು ತನಿಖೆ ಮುಂದುವರಿಸಿದ್ದಾರೆ.
ಪ್ರತಿ ಪ್ರಕರಣಕ್ಕೂ 40 ಮಂದಿಗೆ ನೋಟಿಸ್: ತನಿಖೆಯ ಭಾಗವಾಗಿ ಪ್ರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿಷ್ಠ 40 ಮಂದಿಗೆ ನೋಟಿಸ್ ನೀಡಲಾಗುತ್ತಿದ್ದು, ವಿಚಾರಣೆಯ ವೇಳೆ ದಾಖಲೆಗಳನ್ನು ಸಲ್ಲಿಸಲು ಆದೇಶಿಸಲಾಗಿದೆ.
ವಿಚಾರಣೆಗೆ ಹಾಜರಾಗಲು ಸೂಚನೆ
ಲೋಕಾಯುಕ್ತ ಎಸ್ಪಿ ಉದೇಶ್ ಅವರು ಪ್ರಕರಣದ ಪ್ರತಿಯೊಂದು ಮಗ್ಗುಲನ್ನು ಪರಿಶೀಲಿಸುತ್ತಿದ್ದು, ಸೈಟ್ ಪಡೆದವರು ಯಾವ ಆಧಾರದ ಮೇಲೆ ನಿವೇಶನ ಪಡೆದಿದ್ದಾರೆ ಮತ್ತು ಅದಕ್ಕೆ ಪೂರಕವಾದ ದಾಖಲೆಗಳು ಸರಿಯಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ನೋಟಿಸ್ ನೀಡಲಾಗಿದೆ. ನಿಗದಿತ ದಿನಾಂಕದಂದು ವಿಚಾರಣೆಗೆ ಹಾಜರಾಗದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (MUDA) ಭೂಮಿ ಕಳೆದುಕೊಂಡವರಿಗೆ ನೀಡುವ 50:50 ಅನುಪಾತದ ಯೋಜನೆಯಡಿ ನಡೆದಿದೆ ಎನ್ನಲಾದ ಅಕ್ರಮಗಳೇ ಈ ವಿವಾದದ ಕೇಂದ್ರಬಿಂದು. ಅಂದರೆ, ಬಡಾವಣೆಗಾಗಿ ರೈತರಿಂದ ಅಥವಾ ಮಾಲೀಕರಿಂದ ಭೂಮಿ ಪಡೆದಾಗ, ಅಭಿವೃದ್ಧಿಪಡಿಸಿದ ಅರ್ಧದಷ್ಟು ನಿವೇಶನಗಳನ್ನು (50%) ಭೂಮಾಲೀಕರಿಗೆ ನೀಡುವ ಯೋಜನೆ ಇದು.
ನಿಯಮಗಳ ಉಲ್ಲಂಘನೆ : ಈ ಯೋಜನೆಯಡಿ ನಿವೇಶನಗಳನ್ನು ಹಂಚುವಾಗ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಮತ್ತು ಅರ್ಹರಲ್ಲದವರಿಗೆ ಬೆಲೆಬಾಳುವ ನಿವೇಶನಗಳನ್ನು ನೀಡಲಾಗಿದೆ ಎಂಬುದು ಮುಖ್ಯ ಆರೋಪ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ರಾಜ್ಯಪಾಲರು ಅನುಮತಿ ನೀಡಿದ್ದರು.ನಂತರ ನಡೆದ ಪ್ರಮುಖ ಬೆಳವಣಿಗೆಗಳ ನಂತರ ಸಿಎಂ ಸಿದ್ದರಾಮಯ್ಯಗೆ ಕೋರ್ಟ್ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿತ್ತು.

