ಹೋಟೆಲ್, ಫಾಸ್ಟ್ ಫುಡ್ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ಯುವಕ/ ಯುವತಿಯರಿಗೆ ಮಹತ್ವದ ಮಾಹಿತಿಯೊಂದಿದೆ. ಕರ್ನಾಟಕ ಅಲೆಮಾರಿ/ ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಆಹಾರ ವಾಹಿನಿ (ಆಹಾರ ಕಿಯೋಸ್ಕ್) ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆ, 4 ಚಕ್ರಗಳ ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆ ಇದ್ದು, ಇದಕ್ಕೆ ಆರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ನಿಗಮದಿಂದ ವಾಹನ ಖರೀದಿಗೆ ರೂ. 3 ಲಕ್ಷಗಳ ಸಹಾಯಧನವನ್ನು ಬಿಡುಗಡೆ ಮಾಡಲಾಗುತ್ತದೆ. ಉಳಿಕೆ ಮೊತ್ತವನ್ನು ಬ್ಯಾಂಕುಗಳು/ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬಹುದಾಗಿದೆ.
ಸದ್ಯ ಕೊಡಗು ಜಿಲ್ಲೆಯಲ್ಲಿ ಈ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ನಗರ ಪ್ರದೇಶದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ಪ್ರವರ್ಗ-1ರ ಅಲೆಮಾರಿ/ ಅರೆ ಅಲೆಮಾರಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಯೋಜನೆಯ ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1ರ (ಬೆಸ್ತರ್) ಬುಂಡ್, ಬೈಲಪತ್ತರ್, ಬೈರಾಗಿ (ಬಾವ), ಬಜಿನಿಯ, ಬಾಲಸಂತೋಶಿ-ಜೋಶಿ, ಬಾಜಿಗರ್, ಭರಡಿ, ಬುಡ್ ಬುಡಕಿ-ಜೋಶಿ-ಗೋಂದಳಿ, ಚಾರ, ಚಿತ್ರಕಶಿ-ಜೋಶಿ, ದರ್ ವೇಶ್, ದವೇರಿ, ಧೋಲಿ, ದೊಂಬರಿ, ದೊಂಬಿದಾಸ, ದುರ್ಗ ಮುರ್ಗ (ಬುರ್ ಬುರುಚ), ಗರಡಿ, ಘಿಸಡಿ, ಗೊಲ್ಲ, ಗೊಂದಳಿ, ಗೋಪಲ್, ಹೆಳವ, ಹಾವ್ ಗಾರ (ಹಾವಾಡಿಗರ್), ಜೋಗಿ, ಜೋಶಿ ಸಾದಾ ಜೋಶಿ, ಕಾಶಿಕಪಾಡಿ, ಕಟಬು, ಕೆಲ್‍ಕಾರಿ, ಕಿಳ್ಳೆಕ್ಯಾತಸ್, ಕೊಲಾತಿ, ಮಸನಿಯ ಯೋಗಿ, ನಂದಿವಾಸ-ಜೋಶಿ-ಘೊಂಡಲ್-ಫುಲ್ ಮಲ್ಲಿ, ನಾಥಪಂಥಿ, ಡೌರಿಗೋಸಾವಿ, ನೀರ್ ಶಿಕಾರಿ, ಒಂಗಲ್, ಪಿಚಗುಂಟಲು, ಸನ್ ಸಿಯ, ಸರಾನಿಯ, ಸರೋಡಿ, ಶಿಕ್ಕಲಿಗಾರ್, ತಿರುಮಲಿ, ಪಡಿ, ವಗ್ರಿ, ವೈಡು, ವಾಸುದೇವ್, ವಿರ್ ಈ ಎಲ್ಲಾ ಜಾತಿಗೆ ಸೇರಿದವರಾಗಿರಬೇಕು.
ಅರ್ಜಿ ಸಲ್ಲಿಸುವವರ ಕುಟುಂಬದ ವಾರ್ಷಿಕ ವರಮಾನ ರೂ. 3 ಲಕ್ಷಗಳ ಒಳಗಿರಬೇಕು. ಅರ್ಜಿದಾರರ ವಯಸ್ಸು 21 ರಿಂದ 45 ವರ್ಷಗಳ ಮಿತಿಯಲ್ಲಿರಬೇಕು. ಯೋಜನೆಯಡಿ ಸೌಲಭ್ಯ ಒದಗಿಸಲು ಸೇವಾಸಿಂಧು ತಂತ್ರಾಂಶದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್‌ನಲ್ಲಿರುವಂತೆ ಅರ್ಜಿದಾರರ ಹೆಸರು (ಶ್ರೀ/ ಶ್ರೀಮತಿ ಕುಮಾರಿ ಮುಂತಾದ ದಾಖಲಾತಿಗಳೆಲ್ಲವು) ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದಲ್ಲಿಯೂ ಇದ್ದು, ಹೊಂದಾಣಿಕೆಯಾಗಬೇಕು.
ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಈ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗಗಳ ಪ್ರವರ್ಗ-1ರ ಅಲೆಮಾರಿ/ ಅರೆ ಅಲೆಮಾರಿ ಅರ್ಜಿದಾರರು ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಮಾರ್ಚ್ 6 ಕೊನೆಯ ದಿನವಾಗಿದೆ. ಯೋಜನೆಯ ಅರ್ಹತೆ ಮತ್ತು ಸಲ್ಲಿಸುವ ದಾಖಲಾತಿಗಳ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲೆಮಾರಿ/ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ವೆಬ್‍ಸೈಟ್ www.kaadc.karnataka.gov.in ಇಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿರುತ್ತದೆ.
ಸಹಾಯವಾಣಿ ಸಂಖ್ಯೆ 080-22374832, 8050770004 ಮತ್ತು 8050770005 ಅಥವಾ ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ನಿ), ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ಖುದ್ಧಾಗಿ ಅಥವಾ ದೂರವಾಣಿ ಸಂಖ್ಯೆ 08272-221656ರ ಮೂಲಕ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.

