ಸಾಮಾನ್ಯವಾಗಿ ಪಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕೇಳಿಬರುವ ‘ಹ್ಯಾಪಿ ಅವರ್ಸ್’ ಇದೀಗ MRI ಸ್ಕ್ಯಾನ್‌ಗೂ ಅನ್ವಯಿಸುತ್ತಿದೆಯೇ ಎಂಬ ಚರ್ಚೆ ಶುರುವಾಗಿದೆ. ಅಪೋಲೋ ಆಸ್ಪತ್ರೆಯಲ್ಲಿ ಬೆಳಗಿನ ಜಾವ 2ರಿಂದ 6 ಗಂಟೆಯವರೆಗೆ MRI ಸ್ಕ್ಯಾನ್ ಮಾಡಿಸಿದರೆ ಶೇ.40ರಷ್ಟು ರಿಯಾಯಿತಿ ಸಿಗುತ್ತದೆ ಎಂಬ ಎಕ್ಸ್ ಬಳಕೆದಾರರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿ ಹಾಗೂ ಹಾಸ್ಯಭರಿತ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಹೌದು. ಎಕ್ಸ್ ಬಳಕೆದಾರ ವಿಶಾಲ್ ಖಂಡೇಲ್ವಾಲ್ ಅವರು MRI ಸ್ಕ್ಯಾನ್‌ನ ದರ ವಿಚಾರಿಸಲು ಅಪೋಲೋ ಆಸ್ಪತ್ರೆಗೆ ಕರೆ ಮಾಡಿದ್ದಾಗಿ ತಿಳಿಸಿದ್ದಾರೆ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ MRI ಸ್ಕ್ಯಾನ್‌ಗೆ ₹16,000 ವೆಚ್ಚವಾಗುತ್ತದೆ ಎಂದು ತಿಳಿಸಿದ್ದರಂತೆ.
ಬೆಲೆ ಕೇಳಿ ತಾವು “ಓಹ್!” ಎಂದು ಪ್ರತಿಕ್ರಿಯಿಸಿದಾಗ, ಆಸ್ಪತ್ರೆಯ ಸಿಬ್ಬಂದಿ ಬೆಳಗಿನ ಜಾವ 2 ಗಂಟೆಯಿಂದ 6 ಗಂಟೆಯವರೆಗೆ ‘ಹ್ಯಾಪಿ ಅವರ್ಸ್’ ಇದ್ದು, ಆ ಸಮಯದಲ್ಲಿ MRI ಮಾಡಿಸಿದರೆ 40% ರಿಯಾಯಿತಿ ಸಿಗುತ್ತದೆ ಎಂದು ತಿಳಿಸಿದ್ದಾಗಿ ಖಂಡೇಲ್ವಾಲ್ ಹೇಳಿದ್ದಾರೆ.
ಈ ಸಂಭಾಷಣೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಅವರು, “ಅಪೋಲೋ ಆಸ್ಪತ್ರೆಗೆ MRIಗಾಗಿ ಕರೆ ಮಾಡಿದೆ. ‘ಸರ್, ವೆಚ್ಚ ₹16,000’ ಎಂದರು. ‘ಓಹ್!’ ಎಂದೆ. ಆದರೆ ಬೆಳಗಿನ ಜಾವ 2ರಿಂದ 6ರವರೆಗೆ ನಮ್ಮಲ್ಲಿ ಹ್ಯಾಪಿ ಅವರ್ಸ್ ಇದೆ. ಆ ಸಮಯದಲ್ಲಿ ಮಾಡಿದರೆ 40% ಡಿಸ್ಕೌಂಟ್ ಸಿಗುತ್ತದೆ ಎಂದರು. MRIಗೆ ಹ್ಯಾಪಿ ಅವರ್ಸ್!” ಎಂದು ಬರೆದಿದ್ದಾರೆ.
ವೈದ್ಯಕೀಯ ಪರೀಕ್ಷೆಯೊಂದಕ್ಕೆ ‘ಹ್ಯಾಪಿ ಅವರ್ಸ್’ ಎಂಬ ಪದ ಬಳಕೆಯಾಗಿರುವುದು ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದ್ದು, ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ಆಸ್ಪತ್ರೆಗಳು ತಡರಾತ್ರಿ ರಿಯಾಯಿತಿ ನೀಡುವ ಸಾಧ್ಯತೆಯ ಬಗ್ಗೆ ಚರ್ಚಿಸಿದ್ದಾರೆ.
ಒಬ್ಬ ಬಳಕೆದಾರರು ತಮ್ಮ ಅನುಭವ ಹಂಚಿಕೊಂಡು, ಅಪೋಲೋ ಆಸ್ಪತ್ರೆಯ ICU ನಿರ್ವಹಣೆಯ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಮತ್ತೊಬ್ಬರು ಹಾಸ್ಯಮಯವಾಗಿ, “ಇದು ತುಂಬಾ ತಮಾಷೆಯಾಗಿದೆ. ಮುಂದೆ ಆಸ್ಪತ್ರೆಗಳಲ್ಲೂ ಪಬ್‌ಗಳು ಬರಬಹುದು” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ತಡರಾತ್ರಿ MRIಗೆ ಕಡಿಮೆ ದರ ನಿಗದಿಪಡಿಸುವುದಕ್ಕೆ ಕಾರಣವನ್ನೂ ವಿವರಿಸಲು ಪ್ರಯತ್ನಿಸಿದ್ದಾರೆ. MRI ಯಂತ್ರಗಳನ್ನು ನಿರಂತರವಾಗಿ ಕ್ರಯೋಜೆನಿಕ್ ಕೂಲಿಂಗ್‌ನಲ್ಲಿ ಇರಿಸಬೇಕಾಗುತ್ತದೆ. ಅವುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಸುಲಭವಲ್ಲ. ಜೊತೆಗೆ ಸ್ಕ್ಯಾನಿಂಗ್‌ಗೆ ಸಮಯ ಬೇಕಾಗಿರುವುದರಿಂದ, ಯಂತ್ರ ಖಾಲಿ ಇರುವ ಸಮಯವನ್ನು ಬಳಸಿಕೊಳ್ಳಲು ಆಸ್ಪತ್ರೆಗಳು ರಿಯಾಯಿತಿ ನೀಡಬಹುದು ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಬ್ಬರು, “ಇಂತಹ ಸಮಯದಲ್ಲಿ ಸಾಮಾನ್ಯವಾಗಿ MRI ಮಾಡಲಾಗುತ್ತದೆಯೇ? ಬೆಳಗಿನ ಜಾವ MRI ಮಾಡಿಸುವುದನ್ನು ಕೇಳಿಯೇ ಇಲ್ಲ. ತುರ್ತು ಪ್ರಕರಣಗಳಿಗೆ ಮಾತ್ರ ಆ ಸಮಯದಲ್ಲಿ ಸೇವೆ ಇರಬಹುದು” ಎಂದು ಪ್ರಶ್ನಿಸಿದ್ದಾರೆ.
ಕಾರ್ಪೊರೇಟ್ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಪರೀಕ್ಷೆಗಳ ದರದ ಬಗ್ಗೆಯೂ ಚರ್ಚೆ ನಡೆದಿದೆ. “ಹ್ಯಾಪಿ ಅವರ್ಸ್ ಎಂದರೆ ಕಡಿಮೆ ಬೇಡಿಕೆಯ ಸಮಯ. ಡಯಾಗ್ನೊಸ್ಟಿಕ್ ಏಜೆನ್ಸಿಗಳಲ್ಲಿ ಇದಕ್ಕಿಂತ ಶೇ.50ರಿಂದ 60ರಷ್ಟು ಕಡಿಮೆ ವೆಚ್ಚವಾಗಬಹುದು” ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ಇದೇ ವೇಳೆ, ಅಪೋಲೋದ ಕೆಲವು ಶಾಖೆಗಳಲ್ಲಿ ಇಂತಹ ರಿಯಾಯಿತಿಗಳು ನಿಜವಾಗಿಯೂ ಲಭ್ಯವಿವೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಬೆಂಗಳೂರು ಬನ್ನೇರುಘಟ್ಟದ ಕೆಲವು ಅಪೋಲೋ ಶಾಖೆಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ MRI/CT ಸ್ಕ್ಯಾನ್‌ಗಳಿಗೆ ಶೇ.50ರವರೆಗೆ ರಿಯಾಯಿತಿ ಸಿಗುತ್ತದೆ ಎಂದು ಅವರು ತಿಳಿಸಿದ್ದಾರೆ. ಪುಣೆಯಲ್ಲಿ ರಾತ್ರಿ 8ರಿಂದ ಮಧ್ಯರಾತ್ರಿವರೆಗೆ ಶೇ.50ರಷ್ಟು ರಿಯಾಯಿತಿ ಇರುವುದಾಗಿ ಹೇಳಿದ್ದು, ಇದು ವೈರಲ್ ಆಗಿರುವ 2ರಿಂದ 6 ಗಂಟೆಯ ಶೇ.40ರ ‘ಹ್ಯಾಪಿ ಅವರ್ಸ್’ ಆಫರ್‌ಗೆ ಹೋಲಿಕೆಯಾಗುತ್ತದೆ ಎಂದು ಹೇಳಿದ್ದಾರೆ.

