ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರ ಗಮನ ಸೆಳೆಯಲು ಕಂಟೆಂಟ್ ಕ್ರಿಯೇಟರ್‌ಗಳು ಮಾಡುವ ಸಾಹಸಗಳು ಒಂದೆರಡಲ್ಲ. ದೆಹಲಿ ಮೂಲದ ಜನಪ್ರಿಯ ಇನ್‌ಫ್ಲುಯೆನ್ಸರ್ ನಿಖಿಲ್ ಕೊಚಾರ್ ಹಂಚಿಕೊಂಡಿರುವ ಮೆಟ್ರೋ ಆಧಾರಿತ ಡ್ಯಾನ್ಸ್ ರೀಲ್ಸ್ ಒಂದು ಇನ್‌ಸ್ಟಾಗ್ರಾಮ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸಿದ್ದು, ಬರೋಬ್ಬರಿ 136 ಮಿಲಿಯನ್ (13.6 ಕೋಟಿಗೂ ಅಧಿಕ) ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಮೆಟ್ರೋ ರೈಲಿಗೆ ತನ್ನ ಮೊಬೈಲ್ ಅಂಟಿಸಿ ಪ್ಲಾಟ್‌ಫಾರ್ಮ್‌ನಲ್ಲಿ ಕುಣಿದು, ರೈಲು ಚಲಿಸಿದಾಗ ಮೊಬೈಲ್ ಹಿಂದೆಯೇ ಓಡುವಂತೆ ನಟಿಸಿದ ಈ ವಿಡಿಯೋ ನೆಟ್ಟಿಗರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ವಿಡಿಯೋ ಸೃಷ್ಟಿಯಾದ ಬಗೆಯ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
ರೈಲಿಗೆ ಫೋನ್ ಅಂಟಿಸಿ ಭರ್ಜರಿ ಡ್ಯಾನ್ಸ್:
2015 ರ ‘ದಿಲ್‌ವಾಲೆ’ ಚಿತ್ರದ ಪ್ರಸಿದ್ಧ ‘ಮನ್ಮಾ ಎಮೋಷನ್ ಜಾಗೆ’ ಹಾಡಿಗೆ ನಿಖಿಲ್ ಕೊಚಾರ್ ದೆಹಲಿ ಮೆಟ್ರೋ ಪ್ಲಾಟ್‌ಫಾರ್ಮ್‌ನಲ್ಲಿ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ವಿಡಿಯೋದ ಆರಂಭದಲ್ಲಿ ಅವರು ತಮ್ಮ ಮೊಬೈಲ್ ಫೋನನ್ನು ಮೆಟ್ರೋ ಬೋಗಿಯ ಹೊರಭಾಗದ ಗಾಜಿಗೆ ಅಂಟಿಸಿದಂತೆ ತೋರಿಸಲಾಗುತ್ತದೆ. ಒಳಗೆ ಕುಳಿತಿದ್ದ ಪ್ರಯಾಣಿಕರು ಇವರ ನೃತ್ಯವನ್ನು ಅಚ್ಚರಿಯಿಂದ ನೋಡುತ್ತಿರುತ್ತಾರೆ.
ವಿಡಿಯೋದ ಅಸಲಿ ರೋಚಕತೆ ಇರುವುದು ಕೊನೆಯಲ್ಲಿ; ಮೆಟ್ರೋ ರೈಲು ನಿಧಾನವಾಗಿ ಚಲಿಸಲು ಆರಂಭಿಸಿದಾಗ, ತನ್ನ ಮೊಬೈಲ್ ರೈಲಿನಲ್ಲೇ ಉಳಿದುಹೋಯಿತು ಎಂಬಂತೆ ನಿಖಿಲ್ ರೈಲಿನ ಬೆನ್ನ ಹಿಂದೆ ಗಾಬರಿಯಿಂದ ಓಡುತ್ತಾರೆ. “ನನ್ನದೇ ಶೈಲಿಯಲ್ಲಿ ದೇಸಿ ವರ್ಷನ್ ಟ್ರೆಂಡ್ ಸೆಟ್ ಮಾಡಿದ್ದೇನೆ (ಕೊನೆಯವರೆಗೂ ನೋಡಿ)” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ಈ ರೀಲ್ಸ್‌ಗೆ ಬರೋಬ್ಬರಿ 4.7 ಮಿಲಿಯನ್‌ಗಿಂತಲೂ ಹೆಚ್ಚು (47 ಲಕ್ಷ) ಲೈಕ್ಸ್‌ಗಳು ಹರಿದುಬಂದಿವೆ.
‘ಫೋನ್ ವಾಪಸ್ ಸಿಕ್ಕಿದ್ದು ಹೇಗೆ?’ ನೆಟ್ಟಿಗರ ತಲೆಕೆಡಿಸಿದ ಪ್ರಶ್ನೆ
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ಜನರು, “ಮೆಟ್ರೋ ಹೊರಟುಹೋದ ಮೇಲೆ ನಿಮ್ಮ ಫೋನ್ ವಾಪಸ್ ಹೇಗೆ ಸಿಕ್ತು?”, “ರೈಲಿಗೆ ಅಂಟಿಸಿದ ಫೋನ್ ಮುಂದಿನ ಸ್ಟೇಷನ್‌ನಲ್ಲಿ ಬಿದ್ದೋಗಿಲ್ವಾ?” ಎಂದು ಕಮೆಂಟ್‌ಗಳ ಮೂಲಕ ಪ್ರಶ್ನಿಸಲು ಶುರುಮಾಡಿದರು.
ಆದರೆ, ಕೆಲವೇ ಕ್ಷಣಗಳಲ್ಲಿ ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು ಈ ವಿಡಿಯೋದ ಹಿಂದಿನ ಅಸಲಿ ಗುಟ್ಟನ್ನು ಪತ್ತೆಹಚ್ಚಿ ರಟ್ಟು ಮಾಡಿದ್ದಾರೆ.
ಗ್ಲಾಸ್ ರಿಫ್ಲೆಕ್ಷನ್‌ನಲ್ಲಿ ಬಯಲಾಯ್ತು ಕ್ಯಾಮೆರಾ ಟ್ರಿಕ್ !
ವಿಡಿಯೋದ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟ ವೀಕ್ಷಕರು, ಇದು ಸಂಪೂರ್ಣವಾಗಿ ಪ್ಲಾನ್ ಮಾಡಿ ಚಿತ್ರೀಕರಿಸಿದ ಹಾಗೂ ಎಡಿಟ್ ಮಾಡಿದ ದೃಶ್ಯ ಎಂದು ಸಾಕ್ಷಿ ಸಮೇತ ತೋರಿಸಿದ್ದಾರೆ:
ಒಳಗಿದ್ದ ವ್ಯಕ್ತಿಯೇ ಶೂಟ್ ಮಾಡಿದ್ದು: ಮೆಟ್ರೋದ ಕಿಟಕಿಯ ಗಾಜಿನಲ್ಲಿ ಮತ್ತೊಬ್ಬ ವ್ಯಕ್ತಿಯ ಪ್ರತಿಬಿಂಬ (Reflection) ಸ್ಪಷ್ಟವಾಗಿ ಕಾಣಿಸುತ್ತಿದ್ದು, ರೈಲಿನ ಒಳಗಡೆ ನಿಂತಿದ್ದ ಅವರ ಸ್ನೇಹಿತನೇ ಒಳಗಿನಿಂದ ಕ್ಯಾಮೆರಾ ಹಿಡಿದು ಶೂಟ್ ಮಾಡಿದ್ದಾನೆ ಎಂದು ನೆಟ್ಟಿಗರು ಗಮನಿಸಿದ್ದಾರೆ.
ಎರಡು ಕ್ಲಿಪ್‌ಗಳ ಜೋಡಣೆ: ಆರಂಭದಲ್ಲಿ ಮೊಬೈಲ್ ಅಂಟಿಸುವಂತೆ ತೋರಿಸಿದ ಕ್ಲಿಪ್ ಬೇರೆ, ರೈಲು ಚಲಿಸುವಾಗ ಒಳಗಿನಿಂದ ಶೂಟ್ ಮಾಡಿದ ಕ್ಲಿಪ್ ಬೇರೆ. ರೈಲು ಹೊರಡುವ ಮುನ್ನವೇ ಹೊರಗಡೆ ಅಂಟಿಸಿದ್ದ ಫೋನ್ ಅನ್ನು ತೆಗೆಯಲಾಗಿದೆ.
ಕ್ಯಾಮೆರಾ ಗುಣಮಟ್ಟ: ಗಾಜಿನ ಹೊರಗಿನಿಂದ ಅಂಟಿಸಿದ ಫೋನ್‌ನಲ್ಲಿ ಇಷ್ಟು ಸ್ಪಷ್ಟವಾದ ಆಡಿಯೋ ಮತ್ತು ವಿಡಿಯೋ ರೆಕಾರ್ಡ್ ಆಗಲು ಸಾಧ್ಯವಿಲ್ಲ, ಒಳಗಿನಿಂದಲೇ ಶೂಟ್ ಮಾಡಲಾಗಿದೆ ಎಂದು ಟೆಕ್ ಪ್ರಿಯರು ವಿವರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೀವ್ಸ್ ಪಡೆಯಲು ಕ್ರಿಯೇಟರ್ ಮಾಡಿದ ಈ ಜಾಣ್ಮೆಯ ಎಡಿಟಿಂಗ್ ಟ್ರಿಕ್ ಬಯಲಾಗಿದ್ದರೂ, ವೀಕ್ಷಕರನ್ನು ಕೊನೆಯವರೆಗೂ ಕಟ್ಟಿಹಾಕುವಂತೆ ಮಾಡಿದ ಆತನ ಪ್ರಯತ್ನ ಮತ್ತು ಡ್ಯಾನ್ಸ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

