ಬೆಂಗಳೂರು: ಮೇಕೆದಾಟು ಯೋಜನೆಗೆ ವೇಗ ನೀಡಲು ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಖಡಕ್ ಸೂಚನೆ ನೀಡಿದ್ದಾರೆ.
ವಿಕಾಸಸೌಧದಿಂದ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವ ಚಲುವರಾಯಸ್ವಾಮಿ ಮೇಕೆದಾಟು ಯೋಜನೆಗೆ ವೇಗ ನೀಡಬೇಕು. ಮುಳುಗಡೆ ಭೂಮಿಗೆ ಪರ್ಯಾಯ ಜಮೀನು ಶೀಘ್ರವೇ ಗುರುತಿಸಲು ಖಡಕ್ ಸೂಚನೆ ನೀಡಿದ್ದಾರೆ.
ವಸತಿ ಪ್ರದೇಶಗಳನ್ನು ಪರ್ಯಾಯ ಭೂಮಿ ಪಟ್ಟಿಗೆ ಸೇರಿಸದಂತೆ ನಿರ್ದೇಶನ ನೀಡಿದ್ದಾರೆ. ಡೀಮ್ಡ್ ಅರಣ್ಯ, ಕಂದಾಯ ಭೂಮಿ ಮಾತ್ರ ಪರಿಗಣಿಸುವಂತೆ ಅವರು ಸೂಚನೆ ನೀಡಿದ್ದಾರೆ. 5096 ಹೆಕ್ಟೇರ್ ಅರಣ್ಯ ಭೂಮಿಗೆ ಪರ್ಯಾಯ ಭೂಮಿ ನೀಡಬೇಕಿದೆ. ಕಂದಾಯ ಇಲಾಖೆ ಈಗಾಗಲೇ 20,000 ಎಕರೆ ಭೂಮಿಯನ್ನು ಗುರುತಿಸಿದೆ. ಮಂಡ್ಯದಲ್ಲಿಯೇ 30 ಸಾವಿರ ಹೆಕ್ಟೇರ್ ಡೀಮ್ಡ್ ಅರಣ್ಯ ಲಭ್ಯವಿದೆ. ಮಂಡ್ಯದಿಂದ 772 ಹೆಕ್ಟೇರ್ ಭೂಮಿ ನೀಡಲು ಸಿದ್ಧತೆ ಪೂರ್ಣಗೊಂಡಿದೆ. 10 ದಿನದಲ್ಲಿ ಜಂಟಿ ಸರ್ವೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸಚಿವರು ಗಡುವು ನೀಡಿದ್ದಾರೆ.
ಮುಳುಗಡೆಯಾಗುವ ಮರಗಳ ಸರ್ವೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಮೇಕೆದಾಟು ಯೋಜನೆಗೆ ನಿರ್ಲಕ್ಷ್ಯ ತೋರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಗೆ ಗೈರು ಹಾಜರಾದ ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಲು ತಿಳಿಸಿದ್ದಾರೆ. ಸೆಪ್ಟೆಂಬರ್ 8ರಂದು ದೆಹಲಿಯಲ್ಲಿ ಅರಣ್ಯ ಕುರಿತು ಸ್ಪಷ್ಟನೆ ಸಿಗುವ ನಿರೀಕ್ಷೆ ಇದೆ. ಒಪ್ಪಿಗೆ ಸಿಕ್ಕರೆ ವಿಳಂಬವಿಲ್ಲದೆ ಭೂಮಿ ಹಸ್ತಾಂತರಕ್ಕೆ ಸೂಚನೆ ನೀಡಲಾಗಿದೆ.
ಮೇಕೆದಾಟು ಯೋಜನೆ: ಕೇಂದ್ರ ಸಚಿವರಿಗೆ ಮನವಿ
ಗುರುವಾರ ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿದ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ, ರಾಜ್ಯದ ದೀರ್ಘಕಾಲದ ಪ್ರಮುಖ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕೃತ ಮನವಿ ಪತ್ರ ಸಲ್ಲಿಸಿದ್ದಾರೆ. ದೇಶದಲ್ಲೇ ರಾಜಸ್ಥಾನದ ನಂತರ ಅತಿ ಹೆಚ್ಚು ಒಣಭೂಮಿ ಹೊಂದಿರುವ ಕರ್ನಾಟಕದಲ್ಲಿ ಕೃಷಿ ಸುಸ್ಥಿರತೆ ಹಾಗೂ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದ ತ್ವರಿತ ಸಹಕಾರ ಅತ್ಯಗತ್ಯವಾಗಿದೆ ಎಂಬುದನ್ನು ಪತ್ರದ ಮೂಲಕ ಗಮನಕ್ಕೆ ತರಲಾಯಿತು.
ಮುಖ್ಯವಾಗಿ, ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯತೆಗಾಗಿ ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಪರಿಷ್ಕೃತ ಡಿಪಿಆರ್‌ಗೆ (DPR) ಕೇಂದ್ರ ಜಲ ಆಯೋಗವು (CWC) ತಕ್ಷಣವೇ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಲಾಯಿತು. ಜೊತೆಗೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 (UKP-III) ಅಡಿಯಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನು ಬಳಸಿಕೊಳ್ಳಲು ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2 ರ (KWDT-II) ಅಂತಿಮ ತೀರ್ಪನ್ನು ಶೀಘ್ರವಾಗಿ ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಲು ಹಾಗೂ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಭದ್ರಾ ಮೇಲ್ದಂಡೆ ಯೋಜನೆಯ ₹5,300 ಕೋಟಿ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಆಗ್ರಹಿಸಲಾಯಿತು.
ಇದಲ್ಲದೆ, ಇಂಡಿ ಶಾಖಾ ಕಾಲುವೆ, ಮಲಪ್ರಭಾ, ಘಟಪ್ರಭಾ, ತುಂಗಭದ್ರಾ ಎಡದಂಡೆ ಕಾಲುವೆಗಳ ಆಧುನೀಕರಣ (ERM) ಹಾಗೂ ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣ ಯೋಜನೆಗಳಿಗೆ ಕೇಂದ್ರದ ಪಿಎಂಕೆಎಸ್‌ವೈ-ಎಐಬಿಪಿ ನೆರವು ಒದಗಿಸಲು ಮತ್ತು ನದಿ ಜೋಡಣೆ ಯೋಜನೆಗಳಲ್ಲಿ ರಾಜ್ಯಕ್ಕೆ ನ್ಯಾಯಯುತವಾದ 40-45 ಟಿಎಂಸಿ ನೀರನ್ನು ಹಂಚಿಕೆ ಮಾಡಲು ಕೋರಲಾಯಿತು.

