ಬೆಂಗಳೂರು : ರಾಜ್ಯದ ರೈತರಿಗೆ ಮತ್ತು ಸಾರ್ವಜನಿಕರಿಗೆ ಕಂದಾಯ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಭೂಮಿ ತಂತ್ರಾಂಶದಲ್ಲಿ ಮ್ಯುಟೇಷನ್ (ಹಕ್ಕು ಬದಲಾವಣೆ) ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಾಗಿದ್ದು, ಯಾವುದೇ ಆಕ್ಷೇಪಣೆ ಇಲ್ಲದ ಪ್ರಕರಣಗಳಲ್ಲಿ ಇನ್ನು ಮುಂದೆ ಸ್ವಯಂಚಾಲಿತವಾಗಿ (Automatic Approval) ಮ್ಯುಟೇಷನ್ ಅನುಮೋದನೆಗೊಳ್ಳಲಿದೆ.
ಈ ಕುರಿತು ಕಂದಾಯ ಆಯುಕ್ತಾಲಯವು ಅಧಿಕೃತ ಆದೇಶ ಹೊರಡಿಸಿದ್ದು, ಜನವರಿ 2026 ರಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ ನೋಟೀಸು ಅವಧಿಯ ನಂತರ ರಾಜಸ್ವ ನಿರೀಕ್ಷಕರು (RI) ಮ್ಯುಟೇಷನ್ ಅನುಮೋದಿಸಬೇಕಿತ್ತು. ಆದರೆ ಹೊಸ ತಂತ್ರಾಂಶದ ಅನ್ವಯ:ನೋಂದಾಯಿತ ಮ್ಯುಟೇಷನ್ (ಕ್ರಯ, ವಿಭಾಗ, ದಾನ ಪತ್ರ): 7 ದಿನಗಳ ನೋಟೀಸು ಅವಧಿ ಮುಗಿದ ತಕ್ಷಣ, ಅಂದರೆ 8ನೇ ದಿನದ ಮಧ್ಯರಾತ್ರಿ ಸರ್ವರ್ ಸಿಗ್ನೇಚರ್ ಮೂಲಕ ತಾನಾಗಿಯೇ ಅನುಮೋದನೆಯಾಗುತ್ತದೆ.
• ನೋಂದಾಯಿತವಲ್ಲದ ಮ್ಯುಟೇಷನ್ (ಪೌತಿ/ವಾರಸುದಾರಿ): 15 ದಿನಗಳ ನೋಟೀಸು ಅವಧಿ ಮುಗಿದ ನಂತರ, ಅಂದರೆ 16ನೇ ದಿನದ ಮಧ್ಯರಾತ್ರಿ ಸ್ವಯಂಚಾಲಿತವಾಗಿ ಅನುಮೋದನೆಗೊಳ್ಳಲಿದೆ.
• ರಾಜಸ್ವ ನಿರೀಕ್ಷಕರ (RI) ಪಾತ್ರ: ಇನ್ನು ಮುಂದೆ ಆಕ್ಷೇಪಣೆ ಇಲ್ಲದ ಪ್ರಕರಣಗಳಲ್ಲಿ ಆರ್ಐ ಅವರ ಮ್ಯಾನುಯಲ್ ಅನುಮೋದನೆಯ ಅಗತ್ಯವಿರುವುದಿಲ್ಲ. ಕೇವಲ ಆಕ್ಷೇಪಣೆ ಇದ್ದಲ್ಲಿ ಮಾತ್ರ ಅವರು ಹಸ್ತಕ್ಷೇಪ ಮಾಡಬಹುದು.
ಸರ್ಕಾರಿ ಜಮೀನುಗಳ ರಕ್ಷಣೆಗಾಗಿ ‘ಫ್ಲ್ಯಾಗ್’ ವ್ಯವಸ್ಥೆ
ಈ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಸರ್ಕಾರಿ ಜಮೀನುಗಳು ಅಥವಾ ಪಿಟಿಸಿಎಲ್ (PTCL) ಜಮೀನುಗಳು ದುರುಪಯೋಗವಾಗದಂತೆ ತಡೆಯಲು ಸರ್ಕಾರ ಎಚ್ಚರಿಕೆ ವಹಿಸಿದೆ. ಎಲ್ಲಾ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಸರ್ಕಾರಿ ಜಮೀನುಗಳನ್ನು ಗುರುತಿಸಿ, ಒಂದು ವಾರದೊಳಗೆ ತಂತ್ರಾಂಶದಲ್ಲಿ ‘ಫ್ಲ್ಯಾಗ್’ (Flag) ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಎಲ್ಲಿ ಜಾರಿಯಾಗಿದೆ?
ಪ್ರಸ್ತುತ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಮಂಡ್ಯ ಜಿಲ್ಲೆಯ ಮಂಡ್ಯ ಮತ್ತು ಮದ್ದೂರು ತಾಲ್ಲೂಕುಗಳಲ್ಲಿ ಯಶಸ್ವಿಯಾಗಿ ಅಳವಡಿಸಲಾಗಿದ್ದು, ಶೀಘ್ರದಲ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದೆ.
ಗಮನಿಸಿ: ಈ ಬದಲಾವಣೆಯಿಂದಾಗಿ ಸಾರ್ವಜನಿಕರು ಮಧ್ಯವರ್ತಿಗಳ ಕಾಟವಿಲ್ಲದೆ ಮತ್ತು ಅಧಿಕಾರಿಗಳ ವಿಳಂಬವಿಲ್ಲದೆ ನಿಗದಿತ ಅವಧಿಯಲ್ಲಿ ತಮ್ಮ ಭೂದಾಖಲೆಗಳನ್ನು ಪಡೆಯಬಹುದಾಗಿದೆ.


