ಮಂಗಳೂರು: ಇದೇ ಮೊದಲ ಬಾರಿಗೆ ಕರಾವಳಿ ನಗರ ಮಂಗಳೂರಿನಲ್ಲಿ ಶುಕ್ರವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಪುಟ ಸಭೆಗೆ ಮಂಗಳೂರು ನಗರ ಸಕಲ ಸಜ್ಜಾಗಿದೆ.
ಮಂಗಳೂರಿನ ಪಡೀಲ್ ನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧದ ಎರಡನೇ ಮಹಡಿಯಲ್ಲಿ ಸಂಪುಟ ಸಭೆ ನಡೆಯಲಿದೆ. ಸಂಪುಟ ಸಭೆಗಾಗಿ ಪ್ರತ್ಯೇಕ ಹವಾನಿಯಂತ್ರಿತ ಮಿನಿ ಹಾಲ್ ಸಿದ್ಧಪಡಿಸಲಾಗಿದೆ. ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟ ಸಚಿವರು ಕುಳಿತುಕೊಳ್ಳಲು ಅನುವಾಗುವಂತೆ ಆಸನಗಳು, ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಸಂಪುಟ ಸಭೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿರುವ ಸಂಪುಟ ಸಭೆಯಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬೆಳವಣಿಗೆ ಕುರಿತಂತೆ ಸಿಎಂ ಹಾಗೂ ಸಚಿವರು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ.
ಸಂಪುಟ ಸಭೆಯಲ್ಲಿ ಪ್ರಮುಖವಾಗಿ ತುಳು ಭಾಷೆಗೆ ಎರಡನೇ ಹೆಚ್ಚುವರಿ ರಾಜ್ಯ ಭಾಷೆ ಸ್ಥಾನಮಾನ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಬದಲಾವಣೆ ಮಾಡುವ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲು CRZ ನಿಯಮ ಸಡಿಲಿಕೆ ಘೋಷಣೆ ಮಾಡುವ ಸಾಧ್ಯತೆ ಇದೆ.
ಮಂಗಳೂರಿನ ಅಭಿವೃದ್ಧಿಗಾಗಿ 5000 ಕೋಟಿ ರೂ. ಮೆಗಾ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಅಲ್ಲದೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಹೆಸರು ನಾಮಕರಣ ಮಾಡುವ ಸಾಧ್ಯತೆ. ಮಂಗಳೂರಿನಲ್ಲಿ ಮೆಡಿಕಲ್ ಟೂರಿಸಂ ಹಬ್, ಕರಾವಳಿಯಲ್ಲಿ ಐಟಿ ಪಾರ್ಕ್ ಸ್ಥಾಪನೆ, ಕರಾವಳಿ ಟೆಂಪಲ್ ಟೂರಿಸಂ, ಮೀನುಗಾರಿಕೆ ಬಂದರು ಅಭಿವೃದ್ಧಿಗೆ ಒತ್ತು ನೀಡುವ ಸಾಧ್ಯತೆ ಇದೆ.
ಸಂಪುಟ ಸಭೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವರು ತೆರೆದ ಡಬಲ್ ಡೆಕ್ಕರ್ ಬಸ್ ನಲ್ಲಿ ಐದು ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಕದ್ರಿ ಅತಿಥಿ ಗೃಹದಿಂದಲ್ಲಿರುವ ಜಿಲ್ಲಾಧಿಕಾರಿ ಕಚೇರಿವರೆಗೆ ರೋಡ್ ಶೋ ನಡೆಯಲಿದೆ.
ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ಜಿಲ್ಲಾಡಳಿತ ಸಚಿವ ಸಂಪುಟ ಸಭೆಗೆ ಅಗತ್ಯ ತಯಾರಿ ಮಾಡಿಕೊಂಡಿದೆ. ಮಂಗಳೂರಿನಲ್ಲಿ ಮೊದಲ ಬಾರಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಗೆ ದ.ಕ. ಜಿಲ್ಲಾ ಕಚೇರಿ ಪ್ರಜಾ ಸೌಧ ಸಜ್ಜಾಗಿದೆ.
ಸಚಿವ ಸಂಪುಟ ಸಭೆ ನಡೆಯುವ ಸಭಾಂಗಣವನ್ನು ಸುಂದರವಾಗಿ ಹೂವುಗಳಿಂದ ಅಲಂಕರಿಸಲಾಗಿದ್ದು, ಪ್ರಜಾಸೌಧದ ಎರಡನೇ ಮಹಡಿಯಲ್ಲಿರುವ ಈ ಸಭಾಂಗಣದ ಗೋಡೆಗಳಲ್ಲಿ ಕರಾವಳಿಯ ಪರಿಸರ, ಸಂಸ್ಕೃತಿಯನ್ನು ಬಿಂಬಿಸುವ ಸುಂದರ ಫೋಟೊಗಳನ್ನು ಅಳವಡಿಸಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಚಿವ ಸಂಪುಟದ ಸಚಿವರು, ಉನ್ನತ ಅಧಿಕಾರಿಗಳು ಮಂಗಳೂರು ನಗರಕ್ಕೆ ಆಗಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರಂಭವಾಗಲಿರುವ ಸಂಪುಟ ಸಭೆಗೆ ಸಚಿವರು, ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳು, ಸಚಿವರ ಆಪ್ತ ಕಾರ್ಯದರ್ಶಿಗಳು ಆಗಮಿಸಲಿದ್ದಾರೆ.

