ಬೆಂಗಳೂರು: ಗೌರಿ-ಗಣೇಶ ಹಬ್ಬ, ವಾರಾಂತ್ಯ ಹಾಗೂ ಸಾಲು ಸಾಲು ಸರ್ಕಾರಿ ರಜೆಗಳ ಹಿನ್ನೆಲೆಯಲ್ಲಿ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಇದನ್ನೇ ಬಳಸಿಕೊಂಡು ಕೆಲ ಖಾಸಗಿ ಬಸ್ ಮಾಲೀಕರು ಮತ್ತು ಟ್ರಾವೆಲ್ಸ್ ಏಜೆನ್ಸಿಗಳು ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದೆ.
ಸೆಪ್ಟೆಂಬರ್ 11ರಿಂದ 15ರವರೆಗೆ ಐದು ದಿನಗಳ ಕಾಲ ರಾಜ್ಯಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ 14,987 ವಾಹನಗಳನ್ನು ಪರಿಶೀಲಿಸಲಾಗಿದೆ. ಪ್ರಯಾಣ ದರ ಹೆಚ್ಚಳ, ತೆರಿಗೆ ಬಾಕಿ, ರಹದಾರಿ ಷರತ್ತುಗಳ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 3,756 ಪ್ರಕರಣಗಳನ್ನು ದಾಖಲಿಸಿ, ಒಟ್ಟು 73.65 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
https://x.com/tdkarnataka/status/2098953616887562631
ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಿಂದ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ಕೆಲವು ಖಾಸಗಿ ಬಸ್ಗಳು ಹಾಗೂ ಟ್ರಾವೆಲ್ಸ್ ಏಜೆನ್ಸಿಗಳು ಆನ್ಲೈನ್ ಟಿಕೆಟ್ ಬುಕ್ಕಿಂಗ್ನಲ್ಲಿ ಸಾಮಾನ್ಯ ದರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಿನ ಮೊತ್ತ ವಸೂಲಿ ಮಾಡುತ್ತಿರುವ ಬಗ್ಗೆ ಸಾರಿಗೆ ಇಲಾಖೆಗೆ ದೂರುಗಳು ಬಂದಿದ್ದವು.
ಐದು ದಿನಗಳ ಕಾಲ ತಪಾಸಣೆ
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್ಗಳ ತಪಾಸಣೆ ನಡೆಸಿದರು. ಟಿಕೆಟ್ ದರ, ತೆರಿಗೆ ಪಾವತಿ ಹಾಗೂ ರಹದಾರಿ ಷರತ್ತುಗಳನ್ನು ಪರಿಶೀಲಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ 33.37 ಲಕ್ಷ ರೂ. ತೆರಿಗೆ ಬಾಕಿ ಹಾಗೂ ವಿವಿಧ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ 40.28 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ರಹದಾರಿ ಷರತ್ತುಗಳನ್ನು ಉಲ್ಲಂಘಿಸಿದ 309 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ 33 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತೆ ಎಂ.ಪಿ. ಓಂಕಾರೇಶ್ವರಿ ತಿಳಿಸಿದ್ದಾರೆ.
ಟಿಕೆಟ್ ಇಲ್ಲದೆ ಪ್ರಯಾಣ: 8.90 ಲಕ್ಷ ರೂ. ದಂಡ
ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕೂಡ ಟಿಕೆಟ್ ರಹಿತ ಪ್ರಯಾಣದ ವಿರುದ್ಧ ತಪಾಸಣೆ ನಡೆಸಿದೆ.ಆಗಸ್ಟ್ ತಿಂಗಳಲ್ಲಿ ರಾಜ್ಯ ಹಾಗೂ ನೆರೆ ರಾಜ್ಯಗಳ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ 44,848 ಬಸ್ಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ 4,461 ಆದಾಯ ಸೋರಿಕೆ ಪ್ರಕರಣಗಳು ಪತ್ತೆಯಾಗಿವೆ.
ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದ 4,862 ಪ್ರಯಾಣಿಕರಿಂದ 8,90,279 ರೂ. ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ, ನಿರ್ವಾಹಕರ ನಿರ್ಲಕ್ಷ್ಯ ಮತ್ತು ಇತರ ಲೋಪಗಳಿಂದ ಸಂಸ್ಥೆಗೆ ಉಂಟಾಗುತ್ತಿದ್ದ 1,33,441 ರೂ. ಆದಾಯ ಸೋರಿಕೆಯನ್ನು ತನಿಖಾ ತಂಡಗಳು ತಡೆದಿವೆ.ಪ್ರಕರಣಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥ ಸಿಬ್ಬಂದಿ ವಿರುದ್ಧವೂ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

