ಮಂಗಳೂರು: ಸಿಬಿಐ ಹಾಗೂ ಮುಂಬೈ ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಸೈಬರ್ ವಂಚಕರು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 75 ವರ್ಷದ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ ಬರೋಬ್ಬರಿ ₹2 ಕೋಟಿ ಹಣವನ್ನು ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೆಪ್ಟೆಂಬರ್ 25ರಂದು ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿ ಸಂದೀಪ್ ರಾವ್ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಹೆಸರಿನಲ್ಲಿ ಮನಿ ಲಾಂಡರಿಂಗ್, ಮಾದಕವಸ್ತು ವ್ಯವಹಾರ ಹಾಗೂ ಮಕ್ಕಳ ಕಳ್ಳಸಾಗಣೆ ಸೇರಿದಂತೆ ಗಂಭೀರ ಅಪರಾಧಗಳು ನಡೆದಿವೆ. ಅಂತಾರಾಷ್ಟ್ರೀಯ ಮನಿ ಲಾಂಡರಿಂಗ್ ಪ್ರಕರಣದ ಆರೋಪಿ ನರೇಶ್ ಗೋಯಲ್ ಅವರೊಂದಿಗೆ ನಿಮಗೆ ಸಂಪರ್ಕವಿದೆ ಎಂದು ಹೇಳಿ ಮಹಿಳೆಯನ್ನು ಬೆದರಿಸಿದ್ದಾನೆ. ನಿಮ್ಮ ವಿರುದ್ಧ ಮುಂಬೈ ಕೊಲಾಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾನೆ.
ಇದಾದ ಬಳಿಕ ಮತ್ತೊಬ್ಬ ವ್ಯಕ್ತಿ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮಾಡಿ ತಾನು ಸಿಬಿಐ ಅಧಿಕಾರಿ ‘ಸಮಾಧಾನ್ ಪವಾರ್’ ಎಂದು ಪರಿಚಯಿಸಿಕೊಂಡಿದ್ದಾನೆ. ಪ್ರಕರಣ ಗಂಭೀರವಾಗಿದ್ದು, ವಿಚಾರವನ್ನು ಯಾರಿಗೂ ತಿಳಿಸಬಾರದು, ತಾವು ನಿರಂತರವಾಗಿ ಸರ್ವೇಲೈನ್ಸ್ ನಲ್ಲಿದ್ದೀರಿ ಎಂದು ಹೇಳಿ ಮಹಿಳೆಯಲ್ಲಿ ಮತ್ತಷ್ಟು ಭಯ ಹುಟ್ಟಿಸಿದ್ದಾರೆ. ‘ನ್ಯಾಷನಲ್ ಸೀಕ್ರೆಸಿ ಆಕ್ಟ್’ ಸೇರಿದಂತೆ ಕಾನೂನುಗಳ ಹೆಸರನ್ನು ಬಳಸಿಕೊಂಡು ವಂಚಕರು ತಮ್ಮ ಮಾತನ್ನು ನಿಜವೆಂದು ನಂಬಿಸುವ ಪ್ರಯತ್ನ ಮಾಡಿದ್ದಾರೆ.
ನಂತರ ಮಹಿಳೆಯ ಬ್ಯಾಂಕ್ ಖಾತೆ, ಆಸ್ತಿ ಹಾಗೂ ಹಣಕಾಸಿನ ವಿವರಗಳನ್ನು ಆರೋಪಿಗಳು ಪಡೆದುಕೊಂಡಿದ್ದಾರೆ. ಖಾತೆ ಹಾಗೂ ಆಸ್ತಿ ಪರಿಶೀಲನೆ ನಡೆಸಿ ಎರಡು ದಿನಗಳಲ್ಲಿ ‘ಕ್ಲಿಯರೆನ್ಸ್’ ನೀಡುವುದಾಗಿ ನಂಬಿಸಿದ್ದಾರೆ. ತನಿಖೆಯ ಭಾಗವಾಗಿ ಹಣವನ್ನು ನಿರ್ದಿಷ್ಟ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು ಎಂದು ಸೂಚಿಸಿದ್ದಾರೆ.
ವಂಚಕರ ಮಾತನ್ನು ನಂಬಿದ ಮಹಿಳೆ ₹60 ಲಕ್ಷವನ್ನು ಮೊದಲ ಹಂತದಲ್ಲಿ ಹಾಗೂ ₹1.40 ಕೋಟಿಯನ್ನು ನಂತರ ಆರ್ಟಿಜಿಎಸ್ ಮೂಲಕ ಆರೋಪಿಗಳು ಸೂಚಿಸಿದ ಖಾತೆಗೆ ವರ್ಗಾಯಿಸಿದ್ದಾರೆ. ಸೆಪ್ಟೆಂಬರ್ 25ರಿಂದ ಅಕ್ಟೋಬರ್ 5ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹2 ಕೋಟಿ ವರ್ಗಾವಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಣ ವರ್ಗಾವಣೆ ಬಳಿಕ ವಂಚಕರ ಸಂಪರ್ಕ ಕಡಿತಗೊಂಡಿದ್ದು, ತಾನು ಸೈಬರ್ ವಂಚನೆಗೆ ಬಲಿಯಾಗಿರುವುದು ಮಹಿಳೆಗೆ ತಿಳಿದುಬಂದಿದೆ. ಬಳಿಕ ಸ್ನೇಹಿತರ ಮೂಲಕ ವಿಚಾರ ಹಂಚಿಕೊಂಡು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳು, ಮೊಬೈಲ್ ಸಂಖ್ಯೆಗಳು ಹಾಗೂ ಇತರ ಡಿಜಿಟಲ್ ದಾಖಲೆಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ವಂಚಕರು ಬಳಸಿರುವ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ ಹಣವನ್ನು ಮರಳಿ ಪಡೆಯುವ ಪ್ರಯತ್ನವೂ ನಡೆಯುತ್ತಿದೆ.
ಸಾರ್ವಜನಿಕರಿಗೆ ಎಚ್ಚರಿಕೆ: ಪೊಲೀಸ್, ಸಿಬಿಐ, ಇಡಿ, ನ್ಯಾಯಾಲಯ ಅಥವಾ ಯಾವುದೇ ಸರ್ಕಾರಿ ಸಂಸ್ಥೆಯ ಅಧಿಕಾರಿಗಳೆಂದು ಹೇಳಿಕೊಂಡು ವಿಡಿಯೋ ಕಾಲ್ ಮೂಲಕ ಬೆದರಿಸಿ ಹಣ ವರ್ಗಾಯಿಸುವಂತೆ ಯಾರಾದರೂ ಒತ್ತಾಯಿಸಿದರೆ ತಕ್ಷಣ ನಂಬಬಾರದು. ಇಂತಹ ಸಂದರ್ಭದಲ್ಲಿ ಕರೆ ಕಡಿತಗೊಳಿಸಿ, ಕುಟುಂಬದವರು ಅಥವಾ ಪೊಲೀಸರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ವಂಚನೆ ನಡೆದಿದ್ದರೆ ತಕ್ಷಣ 1930 ಸೈಬರ್ ಕ್ರೈಂ ಸಹಾಯವಾಣಿಗೆ ಮಾಹಿತಿ ನೀಡುವುದು ಒಳ್ಳೆಯದು.

