ಮಹಾರಾಷ್ಟ್ರ: ಪೆಟ್ರೋಲ್ ಬಂಕ್ ಸೀಲ್ ಮಾಡಲು ತೆರಳಿದ್ದ ಇಂಡಿಯನ್ ಆಯಿಲ್ ಅಧಿಕಾರಿಯೊಬ್ಬರ ಮೇಲೆ ಚಾಕುವಿನಿಂದ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಬಸ್ಮತ್ ತಾಲೂಕಿನ ಅಂಬಾಚೊಂಡಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಇಂಡಿಯನ್ ಆಯಿಲ್ನ ಸೇಲ್ಸ್ ಮ್ಯಾನೇಜರ್ ಹಾಗೂ ಫೀಲ್ಡ್ ಆಫೀಸರ್ ಮಹೇಶ್ ಶೆಲ್ಕೆ ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ಸುಮಾರು 4.30ರ ವೇಳೆಗೆ ಈ ಘಟನೆ ನಡೆದಿದೆ. ಬಂಕ್ನ್ನು ಸೀಲ್ ಮಾಡಿ ಕಂಪನಿಯ ವಶಕ್ಕೆ ಪಡೆಯಲು ಮಹೇಶ್ ಶೆಲ್ಕೆ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿತ್ತು. ಈ ವೇಳೆ ಬಂಕ್ ಮಾಲೀಕರ ಕುಟುಂಬದ ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಸೀಲಿಂಗ್ ವೇಳೆ ಗಲಾಟೆ
ಪೆಟ್ರೋಲ್ ಬಂಕ್ನ್ನು ಕೆಲ ಸಮಯದಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದ ಬಂಕ್ನ್ನು ಸೀಲ್ ಮಾಡುವಂತೆ ಅಧಿಕಾರಿಗಳು ಮುಂದಾಗಿದ್ದರು.
ಅಧಿಕಾರಿಗಳ ತಂಡ ಸೀಲಿಂಗ್ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಬಂಕ್ ಮಾಲೀಕರ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.
ಈ ವೇಳೆ ಮಹೇಶ್ ಶೆಲ್ಕೆ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿದೆ. ಅವರಿಗೆ ಏಳು ಬಾರಿ ಇರಿತವಾಗಿದ್ದು, ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಸಚಿವರಿಂದ ಖಂಡನೆ
ಘಟನೆ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯ ಮೇಲೆ ನಡೆದಿರುವ ಈ ದಾಳಿ ಖಂಡನೀಯ ಎಂದು ಅವರು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ತ್ವರಿತ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಪೊಲೀಸರ ಹಿರಿಯ ಅಧಿಕಾರಿಗಳೊಂದಿಗೆ ವಿಚಾರ ಪ್ರಸ್ತಾಪಿಸಲಾಗಿದೆ ಎಂದು ಪುರಿ ತಿಳಿಸಿದ್ದಾರೆ.
ಮಹೇಶ್ ಶೆಲ್ಕೆ ಅವರ ಕುಟುಂಬಕ್ಕೆ ಪೆಟ್ರೋಲಿಯಂ ಸಚಿವಾಲಯ ಮತ್ತು ಇಂಡಿಯನ್ ಆಯಿಲ್ ಸಂಸ್ಥೆ ಅಗತ್ಯ ನೆರವು ನೀಡಲಿದೆ ಎಂದು ಅವರು ಹೇಳಿದ್ದಾರೆ.
https://x.com/HardeepSPuri/status/2107711138976899141
ಇಂಡಿಯನ್ ಆಯಿಲ್ ಅಧಿಕಾರಿಗಳ ಸಂಘದಿಂದ ಆಗ್ರಹ
ಇಂಡಿಯನ್ ಆಯಿಲ್ ಅಧ್ಯಕ್ಷ ಎ.ಎಸ್. ಸಾಹ್ನಿ ಕೂಡ ಮಹೇಶ್ ಶೆಲ್ಕೆ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕರ್ತವ್ಯ ನಿರ್ವಹಿಸುವ ವೇಳೆ ಅವರು ದಾಳಿಗೆ ಒಳಗಾಗಿರುವುದು ದುಃಖಕರ ಎಂದು ಹೇಳಿದ್ದಾರೆ.
ಇಂಡಿಯನ್ ಆಯಿಲ್ ಅಧಿಕಾರಿಗಳ ಸಂಘವೂ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದೆ. ಪ್ರಕರಣದ ಬಗ್ಗೆ ತ್ವರಿತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಈ ಘಟನೆ 2005ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಇಂಡಿಯನ್ ಆಯಿಲ್ ಅಧಿಕಾರಿ ಮಂಜುನಾಥ್ ಶಣ್ಮುಗಂ ಹತ್ಯೆಯನ್ನು ಮತ್ತೆ ನೆನಪಿಸಿದೆ.
ಪೆಟ್ರೋಲ್ ಬಂಕ್ನಲ್ಲಿ ಅಕ್ರಮ ಪತ್ತೆಯಾದ ಹಿನ್ನೆಲೆಯಲ್ಲಿ ಮಂಜುನಾಥ್ ಅವರು ಪರಿಶೀಲನೆ ನಡೆಸಿದ್ದರು. ಬಳಿಕ ಬಂಕ್ಗೆ ಇಂಧನ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. 2005ರ ನವೆಂಬರ್ನಲ್ಲಿ ಮಂಜುನಾಥ್ ಅವರ ಮೃತದೇಹ ಪತ್ತೆಯಾಗಿತ್ತು.
ಇದೀಗ ಮತ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಇಂಡಿಯನ್ ಆಯಿಲ್ ಅಧಿಕಾರಿಯೊಬ್ಬರು ದಾಳಿಗೆ ಬಲಿಯಾಗಿರುವುದು ಚರ್ಚೆಗೆ ಕಾರಣವಾಗಿದೆ.

